ಮತದಾರರ ಬೆನ್ನಿಗೆ ಚೂರಿ ಹಾಕಿದ ಮುನಿರತ್ನಗೆ ತಕ್ಕಪಾಠ ಕಲಿಸಿ: ಸಿದ್ದರಾಮಯ್ಯ
ಬೆಂಗಳೂರು(ಅ.28): ಕಾಂಗ್ರೆಸ್ ಪಕ್ಷಕ್ಕೆ ದ್ರೋಹವೆಸಗಿ, ತಮ್ಮನ್ನು ಗೆಲ್ಲಿಸಿದ್ದ ಮತದಾರರ ಬೆನ್ನಿಗೆ ಚೂರಿ ಹಾಕಿ ಹೋಗಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರಿಗೆ ಮನವಿ ಮಾಡಿದ್ದಾರೆ.
ಜೆ.ಪಿ.ಪಾರ್ಕ್ ವಾರ್ಡ್ ಸೇರಿದಂತೆ ಕ್ಷೇತ್ರದ ವಿವಿಧೆಡೆ ಮಂಗಳವಾರ ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ತೆರೆದ ವಾಹನದಲ್ಲಿ ಅಬ್ಬರದ ಪ್ರಚಾರ ನಡೆಸಿದ ಸಿದ್ದರಾಮಯ್ಯ
ಈ ಹಿಂದೆ ಕಾಂಗ್ರೆಸ್ ಮುನಿರತ್ನ ಅವರಿಗೆ ಎರಡು ಬಾರಿ ಚುನಾವಣೆಗೆ ನಿಲ್ಲಲು ಟಿಕೆಟ್ ನೀಡಿದ್ದರಿಂದ ಅವರನ್ನು ಕ್ಷೇತ್ರದ ಮತದಾರರು ಆಶೀರ್ವದಿಸಿ ಗೆಲ್ಲಿಸಿದ್ದರು. ಆದರೆ ಅವರು ಹಣ, ಅಧಿಕಾರಕ್ಕಾಗಿ ಪಕ್ಷಕ್ಕೆ ದ್ರೋಹ ಬಗೆದು, ಮತದಾರರ ಬೆನ್ನಿಗೂ ಚೂರಿ ಹಾಕಿ ಬಿಜೆಪಿಗೆ ಹೋಗಿದ್ದಾರೆ. ಇಂತಹವರನ್ನು ಮತದಾರರು ಸೋಲಿಸಿ ತಕ್ಕಪಾಠ ಕಲಿಸಬೇಕು. ಕ್ಷೇತ್ರಕ್ಕೆ ಯಾರು ಶಾಸಕರಾಗಬೇಕು?, ಶುದ್ಧ ಹಸ್ತದ ಸುಸಂಸ್ಕೃತ, ವಿದ್ಯಾವಂತ ಹಾಗೂ ನೊಂದ ಹೆಣ್ಣು ಮಗಳು ಕುಸುಮಾ ಆಯ್ಕೆಯಾಗಬೇಕೋ ಅಥವಾ ಬೇರೆಯವರೋ ಎಂಬುದನ್ನು ಮತದಾರರೇ ನಿರ್ಧರಿಸಬೇಕು. ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರ ಶಾಂತಿಯುತವಾಗಿರಬೇಕು ಎಂದಾದರೆ ಕುಸುಮಾಗೆ ಮತದಾರರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ ಸಿದ್ದರಾಮಯ್ಯ
ನಾನು ಮುಖ್ಯಮಂತ್ರಿಯಾಗಿದ್ದಾಗ ಮುನಿರತ್ನ, ಎಂಟಿಬಿ ನಾಗರಾಜ್, ಬೈರತಿ ಬಸವರಾಜು ಹಾಗೂ ಎಸ್.ಟಿ. ಸೋಮಶೇಖರ್ ಅವರು ದಿನ ಬೆಳಗಾದರೆ ನನ್ನ ಮನೆಗೆ ಬರುತ್ತಿದ್ದರು. ಬೆಳಗ್ಗೆ ಏಳುವಾಗ ಸಂಜೆ ಮಲಗುವ ಮುನ್ನ ಇವರ ಮುಖ ನೋಡಬೇಕಿತ್ತು. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಪಡೆದುಕೊಳ್ಳಲು ಅವರ ನಡುವೆ ಪೈಪೋಟಿಯೇ ನಡೆಯುತ್ತಿತ್ತು. ರಾಜರಾಜೇಶ್ವರಿ ನಗರಕ್ಕೆ ನಮ್ಮ ಸರ್ಕಾರವಿದ್ದಾಗ ಎರಡು ಸಾವಿರ ಕೋಟಿ ರು.ಗಳಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಉಳಿದ ಮೂವರ ಕ್ಷೇತ್ರಕ್ಕೂ ಸಾವಿರಾರು ಕೋಟಿ ರು. ಅನುದಾನ ನೀಡಿದ್ದೇನೆ. ಆದರೆ, ಇವರಾರಯರೂ ನಂಬಿಕೆ ಉಳಿಸಿಕೊಳ್ಳಲಿಲ್ಲ. ಅವರೆಲ್ಲರೂ ಯಾರಿಗೂ ಹೇಳದೇ, ನನಗೂ ದ್ರೋಹ ಮಾಡಿ 25ರಿಂದ 30 ಕೋಟಿ ರು. ಪಡೆದುಕೊಂಡು ಬಿಜೆಪಿಗೆ ಹೋಗಿಬಿಟ್ಟರು. ಕೊನೆಗೆ ಆ ಅಪವಾದವನ್ನು ನಾನು ಹೊತ್ತುಕೊಳ್ಳಬೇಕಾಯಿತು. ಇವರಿಂದಾಗಿ ನನಗೆ ಕೆಟ್ಟ ಹೆಸರು ಬಂತು ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಇನ್ನು ಈ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಗಾಗಿ ಆ ಪಕ್ಷದ ಬಗ್ಗೆ ನಾನು ಹೆಚ್ಚು ಮಾತನಾಡುವುದೂ ಇಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಶಾಸಕರಾದ ಬೈರತಿ ಸುರೇಶ್, ನಾರಾಯಣಸ್ವಾಮಿ ಮತ್ತಿತರ ನಾಯಕರು ಪ್ರಚಾರದಲ್ಲಿ ಭಾಗವಹಿಸಿ ಕುಸುಮಾ ಪರ ಮತ ಯಾಚಿಸಿದರು.