ರಾಜ್ಯಸಭೆಯ ಅತ್ಯಂತ ಶ್ರೀಮಂತ ಸಂಸದರ ಪಟ್ಟಿ ಬಿಡುಗಡೆ, ಟಾಪ್ 3 ಕೋಟ್ಯಾಧೀಶರು ಯಾರು?
ರಾಜ್ಯಸಭೆ ಮೇಲ್ಮನೆ. ಚಿಂತಕರು, ಮುತ್ಸದ್ಧಿಗಳ ಮನೆ. ಆದರೆ ಇತ್ತೀಚೆಗೆ ರಾಜ್ಯಸಭೆ ಸದಸ್ಯರು ರಾಜಕಾರಣಿಗಳಿಗಿಂತ ಪ್ರಭಾವಿಗಳು, ಶ್ರೀಮಂತರು ಆಗಿದ್ದಾರೆ. ಇದೀಗ ಇದೀಗ ಎಡಿಆರ್ ಹಾಗೂ ನ್ಯೂ ವರದಿ ಪ್ರಕಟಗೊಂಡಿದೆ. ರಾಜ್ಯಸಭೆಯ ಅತ್ಯಂತ ಶ್ರೀಮಂತರ ಸಂಪೂರ್ಣ ಮಾಹಿತಿಯನ್ನೇ ಈ ವರದಿ ಬಹಿರಂಗಪಡಿಸಿದೆ.
ಚಿಂತಕರ ಚಾವಡಿ ಎಂದೇ ಕರೆಯಿಸಿಕೊಳ್ಳುವ ರಾಜ್ಯಸಭೆ ತನ್ನ ಮೂಲ ಸ್ವರೂಪದಿಂದ ಇದೀಗ ಸಂಪೂರ್ಣವಾಗಿ ರಾಜಕೀಯ ಚಾವಡಿಯಾಗಿದೆ ಅನ್ನೋ ವಾದ, ಚರ್ಚೆಗಳು ಹೊಸದೇನಲ್ಲ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ ರಿಫಾರ್ಮ್ಸ್ ಹಾಗೂ ನ್ಯಾಶನಲ್ ಎಲೆಕ್ಷನ್ ವಾಚ್ ಸಂಸ್ಥೆ ರಾಜ್ಯಸಭಾ ಸದಸ್ಯದ ಜಾತಕ ಬಯಲು ಮಾಡಿದೆ.
ರಾಜ್ಯಸಭೆಯ 233 ಸದಸ್ಯರ ಪೈಕಿ ಶೇ.12 ರಷ್ಟು ಸಂಸದರು ಕೋಟ್ಯಾಧೀಶರಾಗಿದ್ದಾರೆ. ಇದರಲ್ಲಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಸಂಸದರೇ ಮುಂಚೂಣಿಯಲ್ಲಿದ್ದಾರೆ. ರಾಜ್ಯಸಭೆಯ ಅತ್ಯಂತ ಶ್ರೀಮಂತ ಸಂಸದ ಅನ್ನೋ ಹೆಗ್ಗಳಿಕೆಗೆ ಬಿಆರ್‌ಎಸ್ ಪಕ್ಷದ ಸಂಸದ ಡಾ. ಬಂಡಿ ಪಾರ್ಥ ಸಾರಧಿ ಪಾತ್ರರಾಗಿದ್ದಾರೆ.
ರಾಜ್ಯಸಭಾ ಸಂಸದ ಬಂಡಿ ಪಾರ್ಥ ಸಾರಧಿ ಒಟ್ಟು ಆಸ್ತಿ ಬರೋಬ್ಬರಿ 5,300 ಕೋಟಿ ರೂಪಾಯಿ. ಇದು ಖುದ್ದು ಬಂಡಿ ಪಾರ್ಥ ಘೋಷಿಸಿದ ಆಸ್ತಿಯಾಗಿದೆ. ಈ ಮೂಲಕ ಅತ್ಯಂತ ಶ್ರೀಮಂತ ರಾಜ್ಯಸಭಾ ಸಂಸದ ಪಟ್ಟ ಪಡೆದುಕೊಂಡಿದ್ದಾರೆ.
ರಾಜ್ಯಸಭಾ ಸಂಸದರ ಪೈಕಿ 2ನೇ ಅತ್ಯಂತ ಶ್ರೀಮಂತ ಸ್ಥಾನ ಆಂಧ್ರ ಪ್ರದೇಶದ ವೈಎಸ್‌ಆರ್‌ಪಿ ಪಕ್ಷದ ಅಲ್ಲಾ ಅಯೋಧ್ಯ ರಾಮಿ ರೆಡ್ಡಿಗೆ ಸಲ್ಲಲಿದೆ. ರಾಮಿ ರೆಡ್ಡಿ ಘೋಷಿಸಿರುವ ಒಟ್ಟು ಆಸ್ತಿ 2577 ಕೋಟಿ ರೂಪಾಯಿ.
ಇನ್ನು ನಟಿಯಾಗಿ ಬಳಿಕ ರಾಜ್ಯಸಭೆ ಪ್ರವೇಶಿಸಿದ ಜಯಾ ಬಚ್ಚನ್ ಮೂರನೇ ಅತ್ಯಂತ ಶ್ರೀಮಂತ ರಾಜ್ಯಸಭಾ ಸಂಸದೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಮಿತಾಬ್ ಬಚ್ಚನ್ ಪತ್ನಿ ಬಳಿ ಒಟ್ಟು 1001 ಕೋಟಿ ರೂಪಾಯಿ ಆಸ್ತಿ ಇದೆ.
ಇನ್ನು ಅತ್ಯಂತ ಕಡಿಮೆ ಆಸ್ತಿ ಹೊಂದಿದ ರಾಜ್ಯಸಭಾ ಸಂಸದರ ಪೈಕಿ ಮೊದಲ ಸ್ಥಾನ ಪಂಜಾಬ್‌ನ ಆಪ್ ಸಂಸದ ಸಂತ ಬಲ್ಬೀರ್ ಸಿಂಗ್‌ಗೆ ಸಲ್ಲಲಿದೆ. ಬಲ್ಬೀರ್ ಸಿಂಗ್ ಒಟ್ಟು 3.79 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದಾರೆ. ಇದು ಸ್ಥಿರಾಸ್ತಿ ಹಾಗೂ ಚರಾಸ್ಥಿಗಳನ್ನು ಒಳಗೊಂಡಿದೆ.
ಆಂಧ್ರ ಪ್ರದೇಶದ 11 ರಾಜ್ಯಸಭಾ ಸಂಸದರ ಪೈಕಿ ಐವರು ಅತ್ಯಂತ ಶ್ರೀಮಂತರಾಗಿದ್ದಾರೆ. ಇನ್ನು ತೆಲಂಗಾಣದ 7 ಸಂಸದರ ಬೈಕಿ ಮೂವರು ಅತ್ಯಂತ ಶ್ರೀಮಂತ ಸಂಸದರಾಗಿದ್ದಾರೆ.
ಹಾಲಿ 225 ರಾಜ್ಯಸಭಾ ಸದಸ್ಯರ ಪೈಕಿ 75 ಸಂಸದರು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ. ಅಂದರೆ ಶೇಕಡಾಾ 33 ರಷ್ಟು ರಾಜ್ಯಸಭಾ ಸಂಸದರು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ.