ರಾಜಕುಮಾರ್‌ಗೆ ನೀಡಿದಷ್ಟೇ ಗೌರವ ಅಂಬರೀಶ್‌ಗೆ ಕೊಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವರನಟ ಡಾ.ರಾಜಕುಮಾರ್ ಅವರಿಗೆ ಸಲ್ಲಿಸಿದಷ್ಟೇ ಗೌರವವನ್ನು ಅಂಬರೀಶ್ ಅವರಿಗೂ ಸಲ್ಲಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ (ಮಾ.16): ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವರನಟ ಡಾ.ರಾಜಕುಮಾರ್ ಅವರಿಗೆ ಸಲ್ಲಿಸಿದಷ್ಟೇ ಗೌರವವನ್ನು ಅಂಬರೀಶ್ ಅವರಿಗೂ ಸಲ್ಲಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಾತ್ಯತೀತ ಜನತಾದಳದಿಂದ ಆಯೋಜಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಾನು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ರಾಜಕುಮಾರ್ ನಿಧನರಾದರು. ಅವರಿಗೆ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟೆ.
ನಂತರ ಅಂಬರೀಶ್ ಅವರು ಮೃತಪಟ್ಟ ಸಮಯದಲ್ಲೂ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರುವುದರಿಂದ ಹಿಡಿದು ಅವರ ಅಂತ್ಯಕ್ರಿಯೆ ಸುಸೂತ್ರವಾಗಿ ನಡೆಯುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ. ಅಲ್ಲದೆ ಡಾ.ರಾಜಕುಮಾರ್ ಸ್ಮಾರಕದ ಎದುರಿನಲ್ಲೇ ಅಂಬರೀಶ್ ಅವರಿಗೂ ಸ್ಮಾರಕ ನಿರ್ಮಿಸಿ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು.
HD Kumaraswamy
ಅಂಬರೀಶ್ ಅವರಿಗೆ ಮೊದಲು ಜೆಡಿಎಸ್ ಟಿಕೆಟ್ ಕೊಟ್ಟು ಗೆಲ್ಲಿಸಿದ್ದು ನಾವು. ನಂತರದಲ್ಲಿ ಅವರು ಕಾಂಗ್ರೆಸ್ ಸೇರಿಕೊಂಡರು. ರಾಜಕೀಯವಾಗಿ ಅವರು ಬೇರೆ ಪಕ್ಷದಲ್ಲಿದ್ದರೂ ವೈಯಕ್ತಿಕವಾಗಿ ನಾವು ಅವರನ್ನು ಬಹಳ ಪ್ರೀತಿ ಅಭಿಮಾನದಿಂದ ಕಂಡಿದ್ದೇವೆ. ಅವರ ಬಗ್ಗೆ ಈಗಲೂ ಅಷ್ಟೇ ಗೌರವ ಅಭಿಮಾನ ಇರುವುದಾಗಿ ತಿಳಿಸಿದರು.
ನಿರಾಸೆ ಮಾಡಲ್ಲ: ಮಂಡ್ಯ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲು ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯ ಆರಂಭದಲ್ಲೇ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಬೇಕು. ನೀವು ಕೇವಲ ಅರ್ಜಿ ಹಾಕಿ ಹೋಗಿ, ನಾವು ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಅಭಿಮಾನಿಗಳು ಕೂಗಿ ಹೇಳಿದರು.