ನಾಮಪತ್ರ ಸಲ್ಲಿಕೆಗೂ ಮುನ್ನ ಸುಧಾಕರ್ ಟೆಂಪಲ್ ರನ್, ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಬೇಸರ
ಚಿಕ್ಕಬಳ್ಳಾಪುರ (ಏ.17): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವ ಡಾ.ಕೆ. ಸುಧಾಕರ್ ಇದೊಂದು ದುರದೃಷ್ಟಕರ ವಿಚಾರ ಆಗಿದೆ. ಶೆಟ್ಟರ್ ಅವರಾಗಿ ಅವರೇ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಆಶಯಗಳಿಗೆ ವಿರುದ್ಧವಾಗಿ ಗೆದ್ದಿದ್ದವರು ಶೆಟ್ಟರ್, ಹೈಕಮಾಂಡ್ ಕೂಡ ಅವರಿಗೆ ಪಕ್ಷ ಹಾಗೂ ದೇಶದ ಸೇವೆಗೆ ಅವಕಾಶ ನೀಡೋದಾಗಿ ಹೇಳಿತ್ತು. ಶಾಸಕರಿಂದ ಸಿಎಂ ವರೆಗೆ ಸಾಕಷ್ಟು ಹುದ್ದೆ ಪಡೆದು ಪಕ್ಷ ಬಿಟ್ಟಿದ್ದು ಸರಿಯಲ್ಲ ಎಂದಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ದೇವಾಲಯಕ್ಕೆ ಭೇಟಿ ನೀಡಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ದೊಡ್ಡಪೆಯಲಗುರ್ಕಿ ಗ್ರಾಮದಲ್ಲಿರುವ ತಮ್ಮ ಮನೆ ದೇವರಾದ ಚೆನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಸುಧಾಕರ್ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಬಿ ಫಾರಂ ದೇವರ ಸನ್ನಿದಿಯಲ್ಲಿಟ್ಟು ಅರ್ಚನೆ ಮಾಡಿಸಿದರು. ಮನೆಯಲ್ಲಿ ಕೂಡ ದೇವರಿಗೆ ಪೂಜೆ ಮಾಡಿ, ತಮ್ಮ ತಾಯಿಯ ಫೋಟೊಗೆ ಪೂಜೆ ಮಾಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ತಮ್ಮ ಚಿಕ್ಕಬಳ್ಳಾಪುರ ಮನೆಯಲ್ಲಿ ಬಿ ಪಾರಂ ಅನ್ನು ಪರಿಶೀಲನೆ ಮಾಡುತ್ತಿರುವ ಸಚಿವ ಡಾ ಕೆ ಸುಧಾಕರ್.