ಆರ್‌ಆರ್ ನಗರ ಉಪಕದನ: ಮುನಿರತ್ನ ಪರ ಡಿಸಿಎಂ, ಸಚಿವರ ಪ್ರಚಾರ
ಬೆಂಗಳೂರು(ಅ.30): ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಹಿ ಗುರುವಾರ ವಿವಿಧೆಡೆ ಹಲವು ಸಚಿವರೂ ಸೇರಿದಂತೆ ಪಕ್ಷದ ಮುಖಂಡರು ಬಿರುಸಿನ ಪ್ರಚಾರ ನಡೆಸುವ ಜತೆಗೆ ಕ್ಷೇತ್ರದ ಪ್ರಮುಖ ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವರು ಒಂದೆಡೆ ಪ್ರಚಾರ ನಡೆಸುತ್ತಲೇ, ಮತ್ತೊಂದಡೆ ಪಕ್ಷದ ಹಿರಿಯ ಮುಖಂಡರ ನಿವಾಸಗಳಿಗೆ ಭೇಟಿ ನೀಡಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ಬೆಳಗ್ಗೆಯೇ ಮಾಜಿ ಮೇಯರ್ ಗೌತಮ್ ಕುಮಾರ್ ಜತೆ ಮತ್ತಿಕೆರೆಗೆ ಆಗಮಿಸಿದ ಅಶ್ವತ್ಥ ನಾರಾಯಣ, ಅಲ್ಲಿನ ಮುತ್ಯಾಲಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕೈಗೊಂಡರು. ತರುವಾಯ ಮುತ್ಯಾಲನಗರ, ಜೆ.ಪಿ.ಪಾರ್ಕ್, ಬಂಡೆಪ್ಪ ಗಾರ್ಡನ್, ಬೃಂದಾವನನಗರದಲ್ಲಿ ಮಾತಯಾಚಿಸಿದರು.
ಬಹುತೇಕ ಕಡೆ ಪಾದಯಾತ್ರೆ ಮಾಡಿಕೊಂಡೇ ಮತಯಾಚಿಸಿದ ಉಪಮುಖ್ಯಮಂತ್ರಿಯನ್ನು ಸ್ಥಳೀಯರು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲದೇ, ಬೆಂಗಳೂರು ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೆ.ಪಿ.ಪಾರ್ಕ್ ಸಮೀಪದ ಚೌಡೇಶ್ವರಿ ಬಸ್ ನಿಲ್ದಾಣ ಸಮೀಪ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತ ನೀಡುವಂತೆ ಮನವಿ ಮಾಡಿದರಲ್ಲದೇ, ಅಭಿವೃದ್ಧಿ ಪರ ಸ್ಥಿರ ಸರ್ಕಾರಕ್ಕೆ ಮತ ಮೀಸಲಿರಲಿ ಎಂದು ಮನವಿ ಮಾಡಿದರು.
ಕಾಂಗ್ರೆಸ್‌ನಲ್ಲಿದ್ದ ಮುನಿರತ್ನ ಅವರು ಬಿಜೆಪಿ ತತ್ವ-ಸಿದ್ಧಾಂತವನ್ನು ಒಪ್ಪಿ ಬಂದಿದ್ದಾರೆ. ಅಭಿವೃದ್ಧಿ ಪರವಾಗದ ಸರ್ಕಾರ ಬರಲು ಕಾರಣರಾಗಿದ್ದಾರೆ. ಮುನಿರತ್ನ ಸೇರಿದಂತೆ ಅವರ ಜತೆ ಬಂದಿರುವ ಬೆಂಬಲಿಗ ಕಾರ್ಯಕರ್ತರನ್ನು ಪ್ರೀತಿಯಿಂದ ಆದರಿಸೋಣ. ಆ ಮೂಲಕ ಮುನಿರತ್ನ ಅವರನ್ನು ಗೆಲ್ಲಿಸೋಣ. ಇದು ಕೋವಿಡ್ ಸಂಕಷ್ಟಕಾಲ. ಆದರೂ ಈ ಚುನಾವಣೆ ನಡೆಯಬೇಕಾದ ಅನಿವಾರ್ಯತೆ ಬಂದಿದೆ. ಯಾವ ಕಾರಣಕ್ಕಾಗಿ ಈ ಚುನಾವಣೆ ಬಂತು ಎಂಬುದನ್ನು ನಾವೆಲ್ಲರೂ ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಮಾಜಿ ಮೇಯರ್ ಗೌತಮ್ ಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ರವೀಂದ್ರ, ಸುನಂದಮ್ಮ, ನಂಜುಂಡಪ್ಪ, ಜಯಪ್ರಕಾಶ್ ಸೇರಿದಂತೆ ಇತರರು ಭಾಗಿಯಾಗಿದ್ದರು.
ಆರ್.ಆರ್.ನಗರದಲ್ಲಿ ಪ್ರಚಾರ ಕೈಗೊಳ್ಳುವ ಮುನ್ನ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ತಾಯಿ ರಾಜರಾಜೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ತರುವಾಯ ಕೈಲಾಸಾಶ್ರಮ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು. ಬಳಿಕ ಚನ್ನಸಂದ್ರದ ಬಿಜೆಪಿ ಮುಖಂಡ ನರಸಿಂಹಯ್ಯ ಅವರ ಮನೆಗೆ ಭೇಟಿ ನೀಡಿ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು. ನಂತರ ರೆಡ್ಡಿ ಫಾರಂಗೆ ತೆರಳಿ ಹಿರಿಯ ಮುಖಂಡ ಪ್ರಭಾಕರ ರೆಡ್ಡಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.