- Home
- News
- Politics
- ಬೆಂಗಳೂರಿನಲ್ಲಿ ಪ್ರಧಾನಿ ಸ್ವಾಗತಿಸಲು ಸಿಎಂ, ಡಿಸಿಎಂಗಿಲ್ಲ ಅವಕಾಶ, ಮೋದಿ ಪ್ರಶ್ನಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್!
ಬೆಂಗಳೂರಿನಲ್ಲಿ ಪ್ರಧಾನಿ ಸ್ವಾಗತಿಸಲು ಸಿಎಂ, ಡಿಸಿಎಂಗಿಲ್ಲ ಅವಕಾಶ, ಮೋದಿ ಪ್ರಶ್ನಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್!
ಚಂದ್ರಯಾನ 3 ಯಶಸ್ಸಿನಿನಿಂದ ವಿಜ್ಞಾನಿಗಳ ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಇಸ್ರೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಬೆಳಂ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಮೋದಿ ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇರಲಿಲ್ಲ. ಮೋದಿ ನಡೆಯನ್ನು ಕಾಂಗ್ರೆಸ್ ಪ್ರಶ್ನಿಸಿ ಇದೀಗ ಪೇಚಿಗೆ ಸಿಲುಕಿದೆ.

ಇಸ್ರೋ ಅಭೂತಪೂರ್ವ ಯಶಸ್ಸಿಗೆ ದೇಶ ವಿದೇಶಗಳಿಂದ ಅಭಿನಂದನೆಗಳು ಹರಿದುಬರುತ್ತಿದೆ. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಆದ ವೇಳೆ ಮೋದಿ ಸೌತ್ ಆಫ್ರಿಕಾದ ಶೃಂಗಸಭೆಯಲ್ಲಿದ್ದರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಂದ್ರಯಾನ 3 ಲ್ಯಾಂಡಿಂಗ್ ವೀಕ್ಷಿಸಿದ್ದರು.
ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗುತ್ತಿದ್ದಂತೆ ಮೋದಿ ತಿರಂಗ ಹಾರಿಸಿ ಸಂಭ್ರಮಿಸಿದ್ದರು. ಬಳಿಕ ಮಾತನಾಡಿದ ಮೋದಿ, ಅಭಿನಂದನೆ ಸಲ್ಲಿಸಿದ್ದರು. ಇದೇ ವೇಳೆ ಇಸ್ರೋಗೆ ಭೇಟಿ ನೀಡಿ ವಿಜ್ಞಾನಿಗಳ ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದರು.
ಸೌತ್ ಆಫ್ರಿಕಾದ ಬ್ರಿಕ್ಸ್ ಶೃಂಗಸಭೆ ಮುಗಿಸಿ ನೇರವಾಗಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಗಮಿಸಿದ ಮೋದಿ, ವಿಜ್ಞಾನಿಗಳ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಮೋದಿ ಆಗಮನದ ವೇಳೆ ಪ್ರೊಟೋಕಾಲ್ ಮುರಿಯಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಪ್ರಧಾನಿ ಯಾವುದೇ ರಾಜ್ಯಕ್ಕೆ ತೆರಳಿದರೆ ಆಯಾ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲರು ಪ್ರಧಾನಿಯನ್ನು ಸ್ವೀಕರಿಸಬೇಕು. ಆದರೆ ಕರ್ನಾಟಕ ಸಿಎಂ ಸಿದ್ದರಾಯ್ಯ, ಡಿಕೆ ಶಿವಕುಮಾರ್ ಇಂದು ನಿಲ್ದಾಣದಲ್ಲಿ ಇರಲಿಲ್ಲ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಂದರೆ ಮೋದಿಗೆ ಕಿರಿಕಿರಿ. ಹೀಗಾಗಿ ಅವರನ್ನು ಕಡೆಗಣಿಸಿದ್ದಾರೆ. ಈ ಮೂಲಕ ಪ್ರೊಟೋಕಾಲ್ ಮುರಿದಿದ್ದಾರೆ ಎಂದು ಜೈರಾಂ ರಮೇಶ್ ಆರೋಪಿಸಿದ್ದರು.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಮೋದಿಯ ಇಸ್ರೋ ಕಾರ್ಯಕ್ರಮದಿಂದ ದೂರ ಇಡಲಾಗಿದೆ. ಮೋದಿ ಹೆಜ್ಜೆ ಹೆಜ್ಜೆಗೂ ರಾಜಕೀಯ ಮಾಡುತ್ತಿದ್ದಾರೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ.
2008ರಲ್ಲಿ ಚಂದ್ರಯಾನ 1 ಯಶಸ್ವಿಯಾಗಿ ಉಡಾವಣೆಗೊಂಡ ಬಳಿಕ ಅಂದಿನ ಪ್ರಧಾನಿ ಮನ್‌ಮೋಹನ್ ಸಿಂಗ್, ಗುಜರಾತ್‌ನ ಅಹಮ್ಮದಾಬಾದ್ ಇಸ್ರೋ ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ಅಂದಿನ ಸಿಎಂ ನರೇಂದ್ರ ಮೋದಿ ಜೊತೆಗೂಡಿ ಇಸ್ರೋಗೆ ತೆರಳಿದ್ದರು. ಇದನ್ನು ಮೋದಿ ಮರೆತಿದ್ದಾರೆ ಎಂದು ಜೈರಾಂ ರಮೇಶ್ ಕುಟುಕಿದ್ದರು.
ಈ ಆರೋಪಗಳಿಗೆ ಮೋದಿ ಉತ್ತರಿಸಿದ್ದಾರೆ. ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಯಾವ ಸಮಯಕ್ಕೆ ತಲುಪುತ್ತೇನೆ ಅನ್ನೋ ಸ್ಪಷ್ಟತೆ ಇರಲಿಲ್ಲ. ಇನ್ನು ಮುಂಜಾನೆ ಸಿಎಂ, ಡಿಸಿಎಂ, ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ಬಂದು ನಿಂತು ತೊಂದರೆಗೆ ಸಿಲುಕುವುದು ಬೇಡ ಅನ್ನೋ ಕಾರಣಕ್ಕೆ ಪ್ರೊಟೋಕಾಲ್ ಮುರಿಯಲಾಗಿದೆ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ನಾವು ಪ್ರಧಾನಿಯನ್ನು ಯಾವುದೇ ಸಮಯದಲ್ಲೂ ಸ್ವಾಗತಿಸಲು ಸಿದ್ಧರಿದ್ದೆವು. ಆದರೆ ಪ್ರಧಾನಿ ಕಾರ್ಯಾಲಯದಿಂದ ಸಂದೇಶ ಬಂದಿತ್ತು. ಮುಂಜಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸುವ ಪ್ರೊಟೋಕಾಲ್‌ಗೆ ಉಪಸ್ಥಿತರಾಗಿ ಇರಬೇಕಿಲ್ಲ. ಸ್ಪಷ್ಟ ಸಮಯದ ನಿಗದಿ ಇಲ್ಲದಿರುವ ಕಾರಣ ಕಾಯುವಿಕೆ ಅಗತ್ಯವಿಲ್ಲ ಎಂಬ ಸಂದೇಶ ಬಂದಿತ್ತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.