ಹುಬ್ಬಳ್ಳಿ: ಕಿಮ್ಸ್‌ನಲ್ಲಿ ವೇದಾಂತ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ
ಹುಬ್ಬಳ್ಳಿ(ಜೂ.13): ಕೋವಿಡ್ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಇಲ್ಲಿನ ಕಿಮ್ಸ್ ಆವರಣದಲ್ಲಿ ವೇದಾಂತ ಕಂಪನಿಯು ಮೇಕ್ ಶಿಫ್ಟ್‌ನಡಿ ನಿರ್ಮಿಸಿರುವ 100 ಬೆಡ್‌ಗಳ ಆಸ್ಪತ್ರೆಯನ್ನು ಶನಿವಾರ ಸಚಿವ ಪ್ರಹ್ಲಾದ ಜೋಶಿ ಲೋಕಾರ್ಪಣೆಗೊಳಿಸಿದ್ದಾರೆ.
ಸದ್ಯ 2ನೆಯ ಅಲೆ ನಿಯಂತ್ರಣದಲ್ಲಿದೆ. ಈ ವೇಳೆ ಈ ಆಸ್ಪತ್ರೆ ಅಗತ್ಯವಿತ್ತಾ ಎಂಬ ಪ್ರಶ್ನೆಯನ್ನೂ ಕೆಲವರು ಕೇಳಿದ್ದಾರೆ. ಆದರೆ, ವೇದಾಂತ ಕಂಪನಿಯವರು ನಮ್ಮ ಮನವಿ ಮೇರೆಗೆ ನಿರ್ಮಿಸಿಕೊಟ್ಟಿದ್ದಾರೆ. ಮೊದಲೇ ನಿರ್ಮಿಸಿ ಕೊಡಲು ಸಿದ್ಧವಿದ್ದರು. ಆದರೆ, ಎಲ್ಲಿ ನಿರ್ಮಿಸಬೇಕೆಂಬ ಗೊಂದಲದಿಂದಾಗಿ ಕೊಂಚ ತಡವಾಯಿತು. ಆದರೆ, ಕೋವಿಡ್ ಸೋಂಕಿತರು ಕಡಿಮೆಯಾಗುತ್ತಿದ್ದಾರೆ. ಅವರನ್ನು ಇಲ್ಲಿಗೆ ಸ್ಥಳಾಂತರಿಸಿ ಅನ್ಯ ರೋಗಿಗಳಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಇದರೊಂದಿಗೆ 3ನೆಯ ಅಲೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಈ ಆಸ್ಪತ್ರೆಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಮೇಕ್ ಶಿಫ್ಟ್‌ನಡಿ ಬರೀ 15-20 ದಿನದಲ್ಲಿ ವೇದಾಂತ ಕಂಪನಿಯು ಈ ಆಸ್ಪತ್ರೆಯನ್ನು ನಿರ್ಮಿಸಿದೆ. ಇದು 15-20 ವರ್ಷ ಬಾಳಕೆಗೆ ಬರಲಿದೆ. ಅಲ್ಲಿವರೆಗೂ ಕಿಮ್ಸ್‌ನವರು ಈ ಆಸ್ಪತ್ರೆಯನ್ನು ಬಳಸಿಕೊಳ್ಳಬೇಕು. ವೈದ್ಯರು ಸೇರಿದಂತೆ ಸಿಬ್ಬಂದಿ, ಔಷಧಿಯನ್ನು ಕಿಮ್ಸ್ ಕೊಡಲಿದೆ. ಉಳಿದ ನಿರ್ವಹಣೆಯನ್ನೂ ವೇದಾಂತ ಕಂಪನಿಯವರೇ ನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಮ್ಮ ಒಂದು ಮನವಿಗೆ ಸ್ಪಂದಿಸಿ ಆಸ್ಪತ್ರೆ ನಿರ್ಮಿಸಿಕೊಟ್ಟಿದ್ದಕ್ಕೆ ವೇದಾಂತ ಕಂಪನಿಗೆ ಧನ್ಯವಾದಗಳು ಎಂದ ಕೇಂದ್ರ ಸಚಿವರು
ಈ ವೇಳೆ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, 2ನೆಯ ಅಲೆಯಲ್ಲಿ ಸಾಕಷ್ಟುದಾನಿಗಳು ಕಿಮ್ಸ್ ಸೇರಿದಂತೆ ರಾಜ್ಯದ್ಯಂತ ಕೋವಿಡ್ ನಿರ್ವಹಣೆಗೆ ಸಾಕಷ್ಟು ದಾನ ಮಾಡಿದ್ದಾರೆ. ವೆಂಟಿಲೇಟರ್, ಆಕ್ಸಿಜನ್ ಕಾನ್ಸ್‌ಂಟೇಟರ್ಸ್, ವೈದ್ಯಕೀಯ ಉಪಕರಣ ಹೀಗೆ ಹಲವು ಬಗೆಯಲ್ಲಿ ನೆರವು ನೀಡಿದ್ದಾರೆ. ವೇದಾಂತ ಕಂಪನಿ ಆಸ್ಪತ್ರೆಯನ್ನೇ ನಿರ್ಮಿಸಿಕೊಟ್ಟಿದೆ ಎಂದು ಶ್ಲಾಘಿಸಿದರು.
ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕೋವಿಡ್ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದರೊಂದಿಗೆ ಕೈಜೋಡಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ವೇದಾಂತ ಕಂಪನಿಯ ಚೇರಮನ್ ಅನಿಲ್ ಅಗ್ರವಾಲ್, ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟುಉತ್ತಮ ಕೆಲಸ ಮಾಡಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಯಾವೊಂದು ಸಮಸ್ಯೆಯಾಗದಂತೆ ಕೋವಿಡ್ ನಿರ್ವಹಿಸಿರುವುದು ಶ್ಲಾಘನೀಯ. ಇದಕ್ಕಾಗಿ ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ರಾಜ್ಯದಲ್ಲಿ 2 ಆಸ್ಪತ್ರೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಕೋವಿಡ್ ಆಸ್ಪತ್ರೆ ನಿರ್ಮಿಸಿಕೊಡಲು ತಮ್ಮ ಕಂಪನಿಗೆ ಅವಕಾಶ ಕೊಟ್ಟಿದ್ದು ನಮಗೆ ಸಂತಸವನ್ನುಂಟು ಮಾಡಿದೆ. ಸಾಮಾಜಿಕ ಕಾರ್ಯದ ವಿಷಯದಲ್ಲಿ ಇನ್ನೂ ಏನಾದರೂ ನೆರವು ಬೇಕಾದರೆ ನಿಸ್ಸಂದೇಹವಾಗಿ ತಿಳಿಸಿದರೆ ಮಾಡಿಕೊಡಲು ಸಿದ್ಧ ಎಂದರು.
ಶಾಸಕರಾದ ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಹಲವರಿದ್ದರು. ಲಂಡನ್‌ನಲ್ಲಿರುವ ವೇದಾಂತ ಕಂಪನಿಯ ಚೇರಮನ್ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವೇದಾಂತ ಕಂಪನಿಯು ಕೋವಿಡ್ ನೆರವು ನೀಡುವುದಕ್ಕಾಗಿ ದೇಶದಲ್ಲಿ ಒಟ್ಟು 10 ಆಸ್ಪತ್ರೆಯನ್ನು ನಿರ್ಮಿಸಿಕೊಟ್ಟಿದೆ. ಕರ್ನಾಟಕದಲ್ಲಿ ಚಿತ್ರದುರ್ಗ ಹಾಗೂ ಹುಬ್ಬಳ್ಳಿ ಕಿಮ್ಸ್‌ನಲ್ಲಿ ನಿರ್ಮಿಸಿದೆ. ಕಿಮ್ಸ್‌ನಲ್ಲಿ 100 ಹಾಸಿಗೆಯ ಆಸ್ಪತ್ರೆ. ಇದರಲ್ಲಿ 80 ಆಕ್ಸಿಜನ್ ಬೆಡ್‌ಗಳಿದ್ದರೆ, 20 ಐಸಿಯು ಬೆಡ್‌ಗಳಿವೆ. 20 ಐಸಿಯು ಬೆಡ್‌ಗಳ ಪೈಕಿ 10 ವೆಂಟಿಲೇಟರ್ ಬೆಡ್‌ಗಳು ಸೇರಿವೆ.