ಸೊಂಟದೆತ್ತರ ಹರಿಯುತ್ತಿದ್ದ ಹಳ್ಳದಲ್ಲೇ ಸಾಗಿ ಶವ ಸಂಸ್ಕಾರ: ಯಾದಗಿರಿಯಲ್ಲಿ ಮನಕಲಕುವ ಘಟನೆ
ಯಾದಗಿರಿ(ಅ.04): ಅನಾರೋಗ್ಯದಿಂದ ಮೃತಪಟ್ಟ ಯುವಕನೊಬ್ಬನ ಶವ ಸಂಸ್ಕಾರಕ್ಕಾಗಿ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲೇ ಶವ ಹೊತ್ತು ಸಾಗಿ ಅಂತ್ಯಸಂಸ್ಕಾರ ನಡೆಸಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಿನಾಸಪೂರ ಗ್ರಾಮದಲ್ಲಿ ನಡೆದಿದೆ.
ಮಿನಾಸಪೂರ ಗ್ರಾಮದ ತಿಮ್ಮಪ್ಪ ಪುಲ್ಲಿ ಎಂಬುವವರು ಸೆ.28ರಂದು ಮೃತಪಟ್ಟಿದ್ದರು. ಇವರ ಜಮೀನು ಹಳ್ಳದಾಚೆ ಇದ್ದುದರಿಂದ ಅಂತ್ಯಸಂಸ್ಕಾರಕ್ಕೆ ಅದನ್ನು ದಾಟುವ ಅನಿವಾರ‍್ಯತೆ ಉಂಟಾಗಿತ್ತು. ಪ್ರತಿ ಮಳೆಗಾಲದಲ್ಲಿ ತಮ್ಮ ಜಮೀನುಗಳಿಗೆ ತೆರಳಬೇಕೆಂದರೆ ಅಥವಾ ಇಲ್ಲಿನ ಯಾರಾದರೂ ತೀರಿಕೊಂಡಿದ್ದಾಗ ದಲಿತರ ಕೇರಿಗಳಲ್ಲಿನ ಜನ ಇಂತಹ ಸಂಕಷ್ಟ ಎದುರಿಸುತ್ತಿದ್ದಾರೆ.
ತಿಮ್ಮಪ್ಪ ಶವಸಂಸ್ಕಾರಕ್ಕೆ ತೆರಳಬೇಕೆಂದರೆ ಸತತ ಮಳೆಯಿಂದಾಗಿ ಹಳ್ಳ ಉಕ್ಕಿ ಹರಿಯುತ್ತಿತ್ತು. ಹಳ್ಳದಾಚೆ ಜಮೀನು ಇದ್ದುದರಿಂದ ಶವಸಂಸ್ಕಾರಕ್ಕೆ ಅಲ್ಲಿಯೇ ಹೋಗುವುದು ಅನಿವಾರ್ಯವಾಗಿತ್ತು. ಸೇತುವೆ ಇಲ್ಲದ್ದರಿಂದ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲೇ ಶವ ಹೊತ್ತುಕೊಂಡು ಸಾಗಿದ ಜನರು ಸಂಸ್ಕಾರ ನಡೆಸಿದ್ದಾರೆ. ಗ್ರಾಮದಲ್ಲಿ ರುದ್ರಭೂಮಿ ಹಾಗೂ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ಕಟ್ಟಬೇಕೆಂದು ಅನೇಕ ಬಾರಿ ಇಲ್ಲಿನ ಗ್ರಾಮಸ್ಥರು ಆಡಳಿತಕ್ಕೆ ಮನವಿ ಮಾಡಿದ್ದರೂ, ಸ್ಪಂದಿಸುತ್ತಿಲ್ಲ. ಹೀಗಾಗಿ ಇಂತಹ ಸಂಕಷ್ಟ ಎದುರಿಸುವುದು ಅನಿವಾರ‍್ಯವಾಗಿದೆ. ಆಡಳಿತ ಇಲ್ಲಿನ ಜನರ ನೋವಿಗೆ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರಾದ ಆನಂದ್ ಅಳಲು ತೋಡಿಕೊಂಡಿದ್ದಾರೆ.
ಮಿನಾಸಪೂರ ಗ್ರಾಮದಲ್ಲಿ ಇಂತಹ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗುರುಮಠಕಲ್ ತಹಸೀಲ್ದಾರ್ ಸಂಗಮೇಶ ಜಿಡಗೆ, ಸೇತುವೆ ನಿರ್ಮಾಣ ಹಾಗೂ ರುದ್ರಭೂಮಿ ಮಂಜೂರು ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಸತತ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಸಾಗಿ ಶವಸಂಸ್ಕಾರ ನಡೆಸಲಾಗಿದೆ. ಇದು ಅನಿವಾರ್ಯವಾಗಿತ್ತು. ಸೇತುವೆ ನಿರ್ಮಾಣವಾಗಿದ್ದರೆ ಇಂತಹ ಪ್ರಮೇಯ ಎದುರಾಗುತ್ತಿರಲಿಲ್ಲ ಎಂದು ಮಿನಾಸಪೂರ ಗ್ರಾಮಸ್ಥ ಮಹಾದೇವಪ್ಪನ ಅವರು ತಿಳಿಸಿದ್ದಾರೆ.