ಗೋಕಾಕ್: 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಬದುಕುಳಿದ ಭೂಪ..!
ಬೆಳಗಾವಿ(ಅ.03): 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಯುವಕನೊಬ್ಬ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ಘಟನೆ ಜಿಲ್ಲೆಯ ಗೋಕಾಕ್ ಫಾಲ್ಸ್ ಬಳಿ ನಿನ್ನೆ(ಶನಿವಾರ) ನಡೆದಿದೆ. ಟೈಂ ಚನ್ನಾಗಿದ್ರೆ ಜೀವ ಹೇಗ್ ಉಳಿಯುತ್ತೆ ಅನ್ನೋದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಪ್ರದೀಪ್ ಸಾಗರ್ ಎಂಬುವರೇ ಅಚ್ಚರಿ ರೀತಿಯಲ್ಲಿ ಬದುಕುಳಿದ ಯುವಕನಾಗಿದ್ದಾನೆ. ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ನಿವಾಸಿಯಾದ ಪ್ರದೀಪ್ ಸಾಗರ್ ಬೆಳಗಾವಿಯ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ಪ್ರದೀಪ್ ತನ್ನ ಸ್ನೇಹಿತರೊಂದಿಗೆ ಗೋಕಾಕ್ ಫಾಲ್ಸ್ ವೀಕ್ಷಣೆಗೆ ಬಂದಿದ್ದರು. ಗೋಕಾಕ್ ಫಾಲ್ಸ್ ವ್ಯೂ ಪಾಯಿಂಟ್‌ಗೆ ಹೋಗುವ ವೇಳೆ ಕಲ್ಲು ಸಂದಿಯೊಳಗೆ ಬಿದ್ದಿದ್ದರು. ಪ್ರದೀಪ್ ಕೆಳಗೆ ಬಿದ್ದಿದ್ದನ್ನು ಕಂಡ ಪ್ರದೀಪ್ ಸ್ನೇಹಿತರು ಒಂದು ಕ್ಷಣ ಹೌಹಾರಿದ್ದರು.
ಪ್ರದೀಪ್ ಕೆಳಗೆ ಬಿದ್ದ ತಕ್ಷಣ ಆತನ ಸ್ನೇಹಿತರು ಗೋಕಾಕ್ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೆರವು ಕೋರಿದ್ದರು. ರಾತ್ರಿ ವೇಳೆಯೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ತಂಡದಿಂದ ಕಾರ್ಯಾಚರಣೆ ನಡೆಸಿದರಾದರೂ ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದರಿಂದ ಪ್ರದೀಪ್ ಪ್ರಜ್ಞೆಯನ್ನ ಕಳೆದುಕೊಂಡಿದ್ದರು. ಹೀಗಾಗಿ ಮೊಬೈಲ್ ಫೋನ್ ರಿಂಗ್ ಆಗ್ತಿದ್ರೂ ಸಹ ಫೋನ್ ರಿಸೀವ್ ಮಾಡದೇ ಪ್ರದೀಪ್ ಇಡೀ ರಾತ್ರಿ ಕಂದಕದಲ್ಲೇ ಕಳೆದಿದ್ದರು.
ಬೆಳಗ್ಗೆ 4 ಗಂಟೆಗೆ ಪ್ರಜ್ಞೆ ಬಂದ ಮೇಲೆ ಪ್ರದೀಪ್ ತಾನೇ ಸ್ನೇಹಿತರಿಗೆ ಫೋನ್ ಮಾಡಿದ್ದರು. ಬಳಿಕ ಗೋಕಾಕ್ ನಗರದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡದಿಂದ ಪ್ರದೀಪ್ ಅವರನ್ನ ರಕ್ಷಿಸಿ ಗೋಕಾಕ್‌ದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕಾಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.