ಮಡಿಕೇರಿ: 400ಕ್ಕೂ ಹೆಚ್ಚು ಸ್ಫೋಟಕ ತಪಾಸಣೆ ನಡೆಸಿದ್ದ ಶ್ವಾನ 'ರ‍್ಯಾಂಬೋ' ಇನ್ನಿಲ್ಲ
ಮಡಿಕೇರಿ(ಅ.09): ಕೊಡಗು ಜಿಲ್ಲಾ ಶ್ವಾನದಳದಲ್ಲಿ ಕಳೆದ 6 ವರ್ಷಗಳಿಂದ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ರ‍್ಯಾಂಬೋ ಹೆಸರಿನ ಶ್ವಾನವು, ದಕ್ಷಿಣ ಕನ್ನಡ ಜಿಲ್ಲೆಯ ಸುಡುಬಿಸಿಲಿಗೆ ಒಗ್ಗಿಕೊಳ್ಳದೆ ಅನಾರೋಗ್ಯಕೀಡಾಗಿ ಬುಧವಾರ ಮಧ್ಯರಾತ್ರಿ ಮೃತಪಟ್ಟಿದೆ.
ಕೊಡಗು ಜಿಲ್ಲಾ ಸಶಸ್ತ್ರದಳದ ಆವರಣದಲ್ಲಿ ಶ್ವಾನದ ಪಾರ್ಥಿವ ಶರೀರಕ್ಕೆ ಗುರುವಾರ ಇಲಾಖೆ ಅಧಿಕಾರಿಗಳು ಪುಷ್ಪಗುಚ್ಛವನ್ನಿರಿಸಿ, ಇಲಾಖಾ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.
ಮಂಗಳೂರು ಬಳಿಯ ಸುರತ್ಕಲ್‌ಗೆ ಕರ್ತವ್ಯ ನಿಮಿತ್ತ ತೆರಳಿದ್ದ ರ‍್ಯಾಂಬೋ ಅಲ್ಲಿಯ ಬಿಸಿ ತಾಳಲಾರದೆ ಜ್ವರದೊಂದಿಗೆ ಹೃದಯಾಘಾತಕ್ಕೊಳಗಾಗಿ ಬುಧವಾರ ನಡುರಾತ್ರಿ ಮೃತಪಟ್ಟಿದೆ. ಮಡಿಕೇರಿಯ ತಂಪಿನ ವಾತಾವರಣದಲ್ಲಿದ್ದ ರ‍್ಯಾಂಬೋ ದಕ್ಷಿಣ ಕನ್ನಡದ ಹವೆಗೆ ದಿಢೀರನೆ ಹೊಂದಿಕೊಳ್ಳಲಿಲ್ಲ. ಸುರತ್ಕಲ್‌ನಲ್ಲಿ ಬುಧವಾರ ಸಂಜೆ ಕರ್ತವ್ಯ ಮುಗಿಸಿದಾಗ 108 ಡಿಗ್ರಿ ಜ್ವರ ಕಾಡುತ್ತಿತ್ತು. ತೀವ್ರ ನಿತ್ರಾಣಗೊಂಡಿದ್ದ ರ‍್ಯಾಂಬೋಗೆ ವೈದ್ಯರು ನಡುರಾತ್ರಿಯವರೆಗೂ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ.
ಈ ಶ್ವಾನವು ಕಳೆದ 6 ವರ್ಷಗಳಲ್ಲಿ ಜಿಲ್ಲೆ ಹಾಗು ಹೊರಜಿಲ್ಲೆಗಳಲ್ಲಿ ನಡೆದ ವಿವಿಧ ಬಂದೋಬಸ್ತ್ ಕರ್ತವ್ಯಗಳ ಸಂದರ್ಭದಲ್ಲಿ 400 ಹೆಚ್ಚು ಸ್ಫೋಟಕ ತಪಾಸಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.
ರ‍್ಯಾಂಬೋ ಕೊಡಗು ಪೊಲೀಸ್ ಶ್ವಾನದಳದ ಅತ್ಯಂತ ವಿಶ್ವಸಾರ್ಹ ಶ್ವಾನವಾಗಿತ್ತು. ಬೆಂಗಳೂರಿನ ಆಡುಗೋಡಿಯಲ್ಲಿನ ಪೊಲೀಸ್ ಶ್ವಾನ ತರಬೇತಿ ಶಿಬಿರದಲ್ಲಿ 9 ತಿಂಗಳ ಕಾಲ ತರಬೇತಿಗೆ ಒಳಪಡಿಸಿದ ಬಳಿಕವೇ ಮಡಿಕೇರಿಯ ಪೊಲೀಸ್ ಶ್ವಾನದಳದ ಡ್ಯೂಟಿಗೆ ಕರೆತರಲಾಗಿತ್ತು.
ಸ್ಫೋಟಕ ಪತ್ತೆ ಕಾರ್ಯಕ್ಕೆ ಮುಖ್ಯವಾಗಿ ರಾರಯಂಬೋವನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮಗಳು ಇದ್ದಾಗ ಮೊದಲು ಸ್ಥಳ ತಪಾಸಣೆ ಮಾಡುತ್ತಿದ್ದ ಡಾಗ್ ಸ್ಕ್ವಾಡ್‌ನಲ್ಲಿ ಕೊಡಗಿನ ರ‍್ಯಾಂಬೋ ಕೂಡ ಇರುತ್ತಿತ್ತು. ಗಣ್ಯಾತಿಗಣ್ಯರ ಕಾರ್ಯಕ್ರಮಗಳು, ಸ್ಫೋಟಕ ಪತ್ತೆಯಂಥ ಕಾರ್ಯಗಳಿಗೆ ರಾರಯಂಬೋ ರಾಜ್ಯದ ಬಹುತೇಕ ಕಡೆ ಕರ್ತವ್ಯ ನಿರ್ವಹಿಸಿದೆ.
ಬೆಂಗಳೂರಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಏರ್ ಶೋನಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ರಾರಯಂಬೋಗೆ ಪ್ರಶಂಸನಾ ಪತ್ರ ಕೂಡ ಸಿಕ್ಕಿದ್ದು ಕೊಡಗು ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿತ್ತು.
ಇಂಥ ಶ್ವಾನ ಸಿಗುವುದು ಬಹಳ ಅಪರೂಪ, ರ‍್ಯಾಂಬೋ ಇಲ್ಲದ ಮುಂದಿನ ದಿನಗಳನ್ನು ಯೋಚನೆ ಮಾಡಲಾಗುತ್ತಿಲ್ಲ ಎಂದು ರಾರಯಂಬೋ ತರಬೇತುದಾರರಾಗಿದ್ದ ಹೆಡ್ ಕಾನ್ಸೆಟೇಬಲ್ ಎಚ್.ಎಸ್. ಸುಕುಮಾರ್ ನೋವಿನಿಂದ ಹೇಳುತ್ತಾರೆ.
ಶ್ವಾನದಳದ ಮುಖ್ಯಸ್ಥ ಜಿತೇಂದ್ರ ರೈ, ಇನ್ನು 7 ದಿನ ಕಳೆದಿದ್ದರೆ ರ‍್ಯಾಂಬೋವಿನ ಹುಟ್ಟು ಹಬ್ಬವಿತ್ತು. ಅಕ್ಟೋಬರ್ 15 ರಾರಯಂಬೋ ಜನ್ಮದಿನವಾಗಿತ್ತು. ಆದರೆ ದಿನ ಹತ್ತಿರ ಬರುತ್ತಿರುವಂತೆಯೇ ರಾರಯಂಬೋ ಶಾಶ್ವತವಾಗಿ ಕಣ್ಣು ಮುಚ್ಚಿದ ಎಂದು ಕಂಬನಿ ಮಿಡಿದರು.
ಪ್ರಸ್ತುತ ಕೊಡಗು ಶ್ವಾನದಲ್ಲಿ ಪೃಥ್ವಿ, ಶೌರ್ಯ, ಲಿಯೋ ಎಂಬ ಮೂರು ಶ್ವಾನಗಳಿವೆ. ಈ ಶ್ವಾನಗಳು ಕೂಡ ರಾರಯಂಬೋ ಅಂತ್ಯಕ್ರಿಯೆಯಲ್ಲಿ ಕಂಬನಿ ಮಿಡಿಯುತ್ತಿದ್ದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ರಾರಯಂಬೋಗೆ ಅಂತಿಮ ನಮನ ಸಲ್ಲಿಸಿದರು.