ರಾಯಚೂರು: ಮಂತ್ರಾಲಯದಲ್ಲಿ ಗುರುರಾಯರ ಮದ್ಯಾರಾಧನೆಯ ಫೋಟೋಸ್
ರಾಯಚೂರು(ಆ.06): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 349ನೇ ಆರಾಧನಾ ಮಹೋತ್ಸವ ಸಪ್ತರಾತ್ರೋತ್ಸವದ ಮದ್ಯಾರಾಧನೆ ದಿನ ತಿರುಮಲ ತಿಮ್ಮಪ್ಪನ ಶೇಷವಸ್ತ್ರ ಸಮರ್ಪಣೆ, ಪ್ರಹ್ಲಾದ ರಾಯರ ಸುವರ್ಣ ರಥೋತ್ಸವ ಸೇರಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಬುಧವಾರ ಜರುಗಿದವು.
ಶ್ರೀಗುರುರಾಜರ ಮದ್ಯಾರಾಧನೆ ನಿಮಿತ್ತ ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ಶ್ರೀಉತ್ಸವ ರಾಯರ ಪಾದಪೂಜೆ ಮತ್ತು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದಕ್ಕೆ ಪಂಚಾಮೃತ ಅಭಿಷೇಕ, ಗ್ರಂಥಗಳ ಪಾರಾಯಣ, ಪಲ್ಲಕ್ಕಿ ಸೇವೆ, ವೇದ-ಮಂತ್ರಗಳ ಘೋಷಣೆ, ದಾಸವಾಣಿ, ಪ್ರವಚನಗಳು ನಡೆದವು.
ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಗುರುರಾಯರ ಮೂಲ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ-ಪೂಜೆ, ಮೂಲ ರಾಮದೇವರಿಗೆ ವಿಶೇಷ ಪೂಜೆ, ಅಲಂಕಾರ ಸಮರ್ಪಣೆ, ಹಸ್ತೋದಕ, ಮಹಾಮಂಗಳಾರತಿ ಸೇವೆ ನೆರವೇರಿಸಿದರು.
ರಾಯರ ಮದ್ಯಾರಾಧನೆ ದಿನದಂದು ಪ್ರತಿ ವರ್ಷ ಟಿಟಿಡಿ ತಿರುಮಲ ತಿಮ್ಮಪ್ಪರ ದೇವಸ್ಥಾನದಿಂದ ಬರುವ ಶೇಷವಸ್ತ್ರವನ್ನು ಶ್ರೀಗಳು ತಮ್ಮ ತಲೆಯ ಮೇಲೆ ಹೊತ್ತು ಮೆರವಣಿಗೆ ಮೂಲಕ ಮಂಚಾಲಮ್ಮ ದೇವಿಗೆ ಬಳಿಕ ರಾಯರ ಮೂಲಬೃಂದಾವನದ ಮುಂದೆ ಇರಿಸಿ ವಿಶೇಷ ಪೂಜೆ ಸಲ್ಲಿಸಿ ಶ್ರೀಗುರುರಾಜರಿಗೆ ಸಮರ್ಪಿಸಿದರು.
ಶ್ರೀಮಠದ ಧಾರ್ಮಿಕ-ವಿಧಿವಿಧಾನಗಳಿಂದ ಗುರುರಾಜರಿಗೆ ಪಾದಪೂಜೆ ಮಾಡಲಾಯಿತು.
ಬಳಿಕ ಮಠದ ಪ್ರಾಂಗಣದಲ್ಲಿ ಪ್ರಹ್ಲಾದರಾಜರ ವಿಗ್ರಹವನ್ನು ಸುವರ್ಣ ರಥದಲ್ಲಿರಿಸಿ ಮಹಾಮಂಗಳಾರತಿ ಸೇವೆಯನ್ನು ನೆರವೇರಿಸಿದ ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದರು.
ರಾಯರ ಮಠದ ಪ್ರಾಂಗಣದ ಸುತ್ತಲು ಸಾಗಿದ ರಥೋತ್ಸವ
ಕೊರೋನಾ ಮಹಾಮಾರಿ ಹಾವಳಿಯಿಂದಾಗಿ ಈ ಬಾರಿಯ ರಾಯರ ಆರಾಧನಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ.
ಸಪ್ತರಾತ್ರೋತ್ಸವದ ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೀಮಿತ ಜನರಿಗೆ ಅವಕಾಶ
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯಾರಾಧನೆಯಲ್ಲಿ ಪಾಲ್ಗೊಂಡ ಮಠದ ವಿದ್ವಾಂಸರು, ಪಂಡಿತರು, ಆಡಳಿತ ಅಧಿಕಾರಿ, ಸಿಬ್ಬಂದಿ ವರ್ಗ, ಗಣ್ಯರು