ನಿರಾಶ್ರಿತರಿಗೆ ಗೌರವಯುತ ಬದುಕು ನಿರ್ಮಿಸುತ್ತೇವೆ: ಸಚಿವ ಶಿವರಾಮ ಹೆಬ್ಬಾರ
ಕಾರವಾರ(ಆ.16): ಅಂಕೋಲಾದ ಅಲಗೇರಿಯಲ್ಲಿ ನಿರ್ಮಿಸಲು ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣಕ್ಕೆ ಕೇವಲ 97.4 ಎಕರೆ ಜಮೀನು ಸಾಕು. 63 ಕುಟುಂಬಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಶಿವರಾಮ ಹೆಬ್ಬಾರ
ಈ ಎಲ್ಲಾ ಕುಟುಂಬಕ್ಕೂ ನೆಲೆ ಒದಗಿಸಿ, ಪರಿಹಾರ ಕಲ್ಪಿಸಿದ ಬಳಿಕವೇ ಮುಂದೆ ಹೆಜ್ಜೆ ಇಡಲಾಗುತ್ತದೆ. ನಿರಾಶ್ರಿತರಿಗೆ ಗೌರವಯುತ ಬದುಕು ಕಟ್ಟಿಕೊಡಲಾಗುತ್ತದೆ. ಜನರಿಗೆ ತೊಂದರೆ ನೀಡಿ ಅಭಿವೃದ್ಧಿ ಮಾಡಬೇಕು ಎನ್ನುವುದು ನಮ್ಮ ಇಚ್ಛೆಯಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೆಬ್ಬಾರ
ಸಾಗರಮಾಲಾ ಯೋಜನೆ ಬಗ್ಗೆ ಮೀನುಗಾರರ ಜತೆ ಚರ್ಚಿಸಿ ಸಮಸ್ಯೆಗಳನ್ನು ಬಗೆ ಹರಿಸಲು ಸರ್ಕಾರ ಸಿದ್ಧವಿದೆ. ಸಾಗರಮಾಲಾ ಯೋಜನೆಯಿಂದ ಯಾವುದೇ ಮೀನುಗಾರರಿಗೆ ತೊಂದರೆ ಆಗುವುದಿಲ್ಲ. ಹುಬ್ಬಳ್ಳಿ -ಅಂಕೋಲಾ ರೈಲ್ವೆ ಯೋಜನೆ ಬಗ್ಗೆ ಪರಿಸರವಾದಿಗಳು ಅನಗತ್ಯವಾಗಿ ತೊಂದರೆ ಕೊಡುವುದರಿಂದ ಜಿಲ್ಲೆಯ ಅಭಿವೃದ್ಧಿ ಮೇಲೆ ಮಾರಕವಾದ ಪರಿಣಾಮವಾಗಲಿದೆ. ಹೀಗಾಗಿ ಅನಾವಶ್ಯಕ ತೊಂದರೆ ನೀಡದೇ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೋರಿದರು.
ಬೇಲೆಕೇರಿ, ಕಾರವಾರ, ಹೊನ್ನಾವರ ಬಂದರುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಆಧಾರದ ಮೇಲೆ) ಅಭಿವೃದ್ಧಿ ಪಡಿಸಿ ಮೀನುಗಾರಿಕೆಯನ್ನು ಔದ್ಯೋಗಿಕವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಮಾಜಾಳಿ, ಬೆಳಂಬರ ಮತ್ತು ಕೇಣಿಯಲ್ಲಿ ಸಮಗ್ರ ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಶಿಕ್ಷಕಿಯರು ನಾಡಗೀತೆ ಹಾಡಿದರು. ಇದಕ್ಕೂ ಮೊದಲು ಸಚಿವ ಶಿವರಾಮ ಹೆಬ್ಬಾರ ತೆರೆದ ಜೀಪಿನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್, ಅರಣ್ಯ, ಅಗ್ನಿಶಾಮಕ, ಗೃಹರಕ್ಷಕ ದಳದ ತಂಡಗಳು ಮಾತ್ರ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಕೋವಿಡ್-19 ಸಂದರ್ಭದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಆರೋಗ್ಯ ಇಲಾಖೆಯ ಡಾ. ಶರದ್ ನಾಯಕ, ಆಶಾ ಕಾರ್ಯಕರ್ತೆ ದೀಪಾಲಿ ಪೆಂಗಿನಕರ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಶಿವಾನಂದ ಕುಡ್ತರಕರ, ಶುಶ್ರೂಷಾಧಿಕ್ಷಕಿ ಸುಮಿತ್ರಾ ನಾಯ್ಕ, ತಹಸೀಲ್ದಾರ ಆರ್.ವಿ. ಕಟ್ಟಿ, ಕಂದಾಯ ನಿರೀಕ್ಷಕ ಶ್ರೀಧರ ನಾಯ್ಕ, ಪಿಡಿಒ ರಮೇಶಕುಮಾರ ರೆಡ್ಡಿ, ಅಂಗನವಾಡಿ ಕಾರ್ಯಕರ್ತೆ ಸರೋಜಿನಿ ಗುನಗಾ, ಪೊಲೀಸ್ ಸಿಬ್ಬಂದಿ ಕೃಷ್ಣಾನಂದ ಸಾಳುಂಕೆ, ನಾರಾಯಣ ನಾಯ್ಕ, ಭಟ್ಕಳ ಪುರಸಭೆಯ ಪೌರ ಕಾರ್ಮಿಕ ಮಹಾದೇವ ಕೊರಾರ ಹಾಗೂ ಅಂಕೋಲಾ ಪುರಸಭೆಯ ಚಂದ್ರಾ ಹರಿಜನ ಅವರನ್ನು ಸನ್ಮಾನಿಸಲಾಯಿತು.
ಶಾಸಕಿ ರೂಪಾಲಿ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಅಪರ ಜಿಲ್ಲಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಎಂ ಇತರರು ಇದ್ದರು.