ಬೆಳಗಾವಿ: ಸಚಿವೆ ಜೊಲ್ಲೆ ದಂಪತಿಯಿಂದ ಕೋವಿಡ್ ರೂಲ್ಸ್ ಬ್ರೇಕ್
ಬೆಳಗಾವಿ(ಅ.16): ಜಿಲ್ಲೆಯ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಲು ತೆರಳಿದ ಮುಜರಾಯಿ ಸಚಿವೆ ಜೊಲ್ಲೆ ದಂಪತಿ ಕೋವಿಡ್- 19 ನಿಯಮಾವಳಿಯನ್ನು ಉಲ್ಲಂಘಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ನಿಯಮವಿದೆ.
ಶುಕ್ರವಾರ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಮುಜರಾಯಿ, ವಕ್ಫ್ ಮತ್ತು ಹಜ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅವರ ಪತಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದರು. ಈ ವೇಳೆ ಯಾರೂ ಕೂಡ ಮಾಸ್ಕ್ ಧರಿಸಿರಲಿಲ್ಲ.
ಸಚಿವರ ಈ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಜನಸಾಮಾನ್ಯರಿಗೆ ಒಂದು ರೂಲ್ಸ್. ಜನಪ್ರತಿನಿಧಿಗಳಿಗೆ ಇನ್ನೊಂದು ರೂಲ್ಸ್ ಸರಿಯೇ ಎಂದು ಅಲ್ಲಿ ನೆರೆದಿದ್ದ ಭಕ್ತರು ಪ್ರಶ್ನಿಸಿದ್ದಾರೆ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ನಡುವೆಯೇ ಆನಂದ ಮಾಮನಿ ಅವರು ಜೊಲ್ಲೆ ದಂಪತಿಯನ್ನು ಸನ್ಮಾನಿಸಿದರು.
ಮುಂಜಾನೆ ಆರು ಗಂಟೆಗೆ ಯಲ್ಲಮ್ಮ ದೇವಾಲಯಕ್ಕೆ ಆಗಮಿಸಿದ ಸಚಿವೆ ಜೊಲ್ಲೆ ದೇವಾಲಯದಲ್ಲಿ ಕೋವಿಡ್ (Covid) ಹಿನ್ನೆಲೆಯಲ್ಲಿ ನಮ್ಮ ನಾಡಿನ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಅನುಗ್ರಹಿಸಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.