ಕಬ್ಬು ನಾಟಿ ಮಾಡಿ ಟ್ರ್ಯಾಕ್ಟರ್ ಓಡಿಸಿದ ಕೃಷಿ ಸಚಿವ ಪಾಟೀಲ್
ಬಸವಕಲ್ಯಾಣ(ಫೆ.21): ಕಬ್ಬು ನಾಟಿ ಮಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ರೈತರೊಂದಿಗೆ ಟ್ರ್ಯಾಕ್ಟರ್ ಏರಿ ಸವಾರಿ ಮಾಡಿದರು. ಜತೆಗೆ ಜೋಳದ ಹೊಲದಲ್ಲಿ ಹಕ್ಕಿಗಳನ್ನು ಓಡಿಸಿ ಅನ್ನದಾತರೊಂದಿಗೆ ಬೆಳೆಗಳ ನಡುವೆ ಹೆಜ್ಜೆ ಹಾಕಿದರು.
ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಭಾಗವಾಗಿ ಶನಿವಾರ ಬಸವ ಕಲ್ಯಾಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರೊಂದಿಗೆ ಬೆರೆತು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡರು. ಅವರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು. ಇದಕ್ಕೂ ಮುನ್ನ, ತಾಲೂಕಿನ ಧನ್ನೂರ(ಕೆ) ಗ್ರಾಮಕ್ಕೆ ಆಗಮಿಸಿದ ಸಚಿವರು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ಗ್ರಾಮದ ಶಂಕರ ಬಿರಾದಾರ ಎಂಬುವರ ಗದ್ದೆಯಲ್ಲಿ ಕಬ್ಬು ನಾಟಿ ಮಾಡಿ, ಇಳುವರಿಯ ಬಗ್ಗೆ ಮಾಹಿತಿ ಪಡೆದರು. ನಂತರ ಬಾಲಾಜಿ ಪಾಟೀಲ್ ಎಂಬುವರ ಹೊಲದಲ್ಲಿ ಟ್ರ್ಯಾಕ್ಟರ್‌ನಲ್ಲಿ ಸವಾರಿ ಮಾಡಿದ ಅವರು, ರಸಗೊಬ್ಬರ ಮತ್ತು ಪೋಂಷಕಾಂಶ ಸಿಂಪಡಣೆ ಮಾಡಿದರು.
ತದನಂತರ ನಾನಾ ಪಾಟೀಲ್‌ರ ಜೋಳದ ಹೊಲದಲ್ಲಿ ಹಕ್ಕಿ ಹೊಡೆಯುವ ನೂತನ ವ್ಯವಸ್ಥೆಗೆ ಚಾಲನೆ ನೀಡಿ, ಮುಸ್ತಾಪೂರ ಕೆರೆ ಬಳಿಯ ದಯಾನಂದ ಪಾಟೀಲ್ ಅವರ ಕಬ್ಬಿನ ಗದ್ದೆಯಲ್ಲಿಯ ಬೆಲ್ಲ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. ಬೆಲ್ಲದ ಮುದ್ದೆ, ಕೊಬ್ಬರಿ ಬೆಲ್ಲ ಹಾಗೂ ಜಿಲ್ಲೆಯ ವಿಶಿಷ್ಟ ಖಾದ್ಯವಾದ ಗಾಣದ ಉಂಡೆ ಸವಿದು, ನಂತರ ಧನ್ನೂರ ಗ್ರಾಮದ ರಾಜಕುಮಾರ ಬಿರಾದಾರ ಹಾಗೂ ದೇವಿಂದ್ರ ಅವರ ಹೊಲದಲ್ಲಿ ಗೋಧಿ ರಾಶಿ ಮಾಡಿದರು.
ಈ ಸಂದರ್ಭಧಲ್ಲಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೇರಿದಂತೆ ಸ್ಥಳೀಯ ಮುಖಂಡರು ಸಚಿವರಿಗೆ ಸಾಥ್ ನೀಡಿದರು.