ಮಡಿಕೇರಿ; ಹೃದಯಾಘಾತಕ್ಕೆ 24 ವರ್ಷದ ಸುಂದರ ಯುವತಿ ಬಲಿ
ಕೊಡಗು (ಜೂ.27): ಮಡಿಕೇರಿಯಲ್ಲಿ ಎಂದಿನಂತೆ ಕೆಲಸಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಹರೆಯದ ವಯಸ್ಸಿನ ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.
ಹೌದು, ಎಂದಿನಂತೆ ತನ್ನ ಕರ್ತವ್ಯಕ್ಕೆ ಹೊರಡಬೇಕಾಗಿದ್ದ ಯುವತಿ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ದಾರುಣ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ.
ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ (24) ಮೃತ ಯುವತಿ ಎಂದು ತಿಳಿದುಬಂದಿದೆ. ಆಕೆ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಂದು ಕೂಡ ಕರ್ತವ್ಯಕ್ಕೆ ಹೊರಟಾಗ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಯುವತಿ ನಿಲಿಕಾ ವಾಪಸ್ ತನ್ನ ಕೋಣೆಗೆ ಹೋಗಿ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ.
ನಂತರ ಯುವತಿಯ ತಾಯಿ ಹಿಂದಿನಿಂದ ಹೋಗಿ ಏನಾಯಿತು ಮಗಳೆ ಎಂದು ಕೇಳುವಷ್ಟರಲ್ಲಿಯೇ ನಿಲಿಕಾಳ ಪ್ರಾಣ ಪಕ್ಷಿ ಹಾರಿ ಹೋಗಿದೆ. ಆಸ್ಪತ್ರೆಗೆ ಕರೆದೊಯ್ದರೂ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ತಮ್ಮ ಕಣ್ಣೆದುರೇ ಮಗಳನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಏಕಾಏಕಿ ಹರೆಯದ ವಯಸ್ಸಲ್ಲಿ ಹೃದಯಾಘಾತಕ್ಕೆ ಬಲಿಯಾದ ನೀಲಿಕಾ ನೋಡಲು ಸುತ್ತಲಿನ ಗ್ರಾಮಸ್ಥರು ನೆರೆದಿದ್ದಾರೆ.