ಕೊಪ್ಪಳ: ಕುದುರೆ ಮೇಲೆ ಕುಮ್ಮಟದುರ್ಗಾ ವೀಕ್ಷಿಸಿದ ಜಿಲ್ಲಾಧಿಕಾರಿ
ರಾಮಮೂರ್ತಿ ನವಲಿ
ಗಂಗಾವತಿ(ಅ.14): ಕಳೆದ ವಾರವಷ್ಟೇ ಕುಮ್ಮಟದುರ್ಗಾ ಬೆಟ್ಟಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಈಗ ಕುದುರೆ ಸವಾರಿ ಮೂಲಕ ಬೆಟ್ಟ ಏರಿ ಪ್ರವಾಸೋದ್ಯಮ ಪ್ರಗತಿಗೆ ಕಾರ್ಯಪ್ರವೃತ್ತರಾಗಿದ್ದು, ಸಾಧಕ, ಬಾಧಕಗಳನ್ನು ಸ್ವತಃ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಜಿಪಂ ಸಿಇಒ ಫೌಜೀಯಾ ತರನ್ನುಮ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಹೇಮಂತ ಕುಮಾರ ಹಾಗೂ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ತಂಡ ಕುದುರೆ ಸವಾರಿ ಮಾಡುವುದರೊಂದಿಗೆ ವೀಕ್ಷಣೆ ಮಾಡಿದರು.
ಗುಡ್ಡ, ಬೆಟ್ಟಗಳಲ್ಲಿ ಕುದುರೆ ಸವಾರಿ ಮೂಲಕ ಐತಿಹಾಸಿಕ ಸ್ಥಳ ವೀಕ್ಷಣೆಗೆ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ರಸ್ತೆ ಜಬ್ಬಲಗುಡ್ಡದಿಂದ 7 ಕಿ.ಮೀ ಕುಮಾರರಾಮ ಬೆಟ್ಟಕ್ಕೆ ಕುದುರೆ ಮೇಲೆ ಸವಾರಿ ಮಾಡಿ ವೀಕ್ಷಿಸಿದ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್
ಗುಜರಾತ್, ಮಹಾರಾಷ್ಟ್ರದ ಸೇರಿದಂತೆ ಕೆಲ ಐತಿಹಾಸಿಕ ಪ್ರದೇಶಗಳಲ್ಲಿ ಮಾತ್ರ ಕುದುರೆ ಮೇಲೆ ಸವಾರಿ ಮಾಡಿ ಪ್ರೇಕ್ಷಣೆಯ ಸ್ಥಳ ವೀಕ್ಷಣೆ ವ್ಯವಸ್ಥೆ ಇದೆ. ಅಲ್ಲದೆ ಬದರಿನಾಥ, ಗಯಾ ಸೇರಿದಂತೆ ಬೆಟ್ಟಗುಡ್ಡಗಳ ಪ್ರದೇಶದಲ್ಲೂ ಕುದುರೆ ಸವಾರಿ ಪ್ರಖ್ಯಾತಿ ಪಡೆದಿದೆ. ಈಗ ಇದೇ ಮಾದರಿಯಲ್ಲಿ ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಕೊಪ್ಪಳ ಜಿಲ್ಲೆ ಅದರಲ್ಲೂ ಗಂಗಾವತಿ ತಾಲೂಕಿನ ಕುಮಾರ ರಾಮ ಬೆಟ್ಟದ ಕುದುರೆ ಕಲ್ಲು, ಹೇಮಗುಡ್ಡ, ವಾಣಿ ಭದ್ರೇಶ್ವರ ದೇವಸ್ಥಾನ, ಚಿಕ್ಕಬೆಣಕಲ್ ಗುಡ್ಡದ ಮೇಲೆ ಇರುವ ಮೌರ್ಯರ ಮನೆಗಳು, ಮುಕ್ಕುಂಪ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಈ ಭಾಗದಲ್ಲಿರುವ ಐತಿಹಾಸಿಕ ಪ್ರದೇಶ ವೀಕ್ಷಣೆಗೆ ಕುದುರೆ ಸವಾರಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾದಿಕಾರಿಗಳೇ ಸವಾರಿ ಮಾಡಿ ವೀಕ್ಷಣೆ ಮಾಡಿ ಸಂತಸ ಪಟ್ಟ ಜಿಲ್ಲಾಧಿಕಾರಿ
ಐತಿಹಾಸಿಕ ಪ್ರದೇಶ ವೀಕ್ಷಿಸಲು ಜಿಲ್ಲಾಡಳಿತ ತಂಡ 6 ಕುದುರೆಗಳನ್ನು ತರಿಸಿ ಟ್ರಯಲ್ ನೋಡಲಾಯಿತು. ಹೊಸಪೇಟೆಯಿಂದ 3 ಕುದುರೆಗಳು, ಕೊಪ್ಪಳದಿಂದ 2 ಕುದುರೆ ಮತ್ತು ಮರಿ ಕುದುರೆ ಸಹಿತ ಕುಮ್ಮಟದುರ್ಗಾಕ್ಕೆ ಆಗಮಿಸಿದ್ದವು. ಜಬ್ಬಲಗುಡ್ಡದಿಂದ ಕುದುರೆ ಸವಾರಿಯಲ್ಲಿ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಜಿಪಂ ಸಿಇಒ ಫೌಜೀಯಾ ತರುನ್ನುಮ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಹೇಮಂತ ಕುಮಾರ ಭಾಗವಹಿಸಿದ್ದರು.
ಗಂಗಾವತಿ ನಗರವು ಕೇವಲ ಭತ್ತದ ಕೇಂದ್ರವಾಗಿ ಹೆಸರುವಾಸಿಯಾಗಿದ್ದಲ್ಲದೆ ಐತಿಹಾಸಿಕ ಪ್ರಸಿದ್ಧ ಸ್ಥಳವೂ ಹೌದು. ಈಗಾಗಲೇ ಆನೆಗೊಂದಿ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಅದರಂತೆ ಕುಮ್ಮಟದುರ್ಗಾ, ಚಿಕ್ಕಬಣಕಲ್, ಹೇಮಗುಡ್ಡ ಸೇರಿದಂತೆ ಐತಿಹಾಸಿಕ ಪ್ರದೇಶಗಳು ಪ್ರವಾಸೋದ್ಯಮ ಕೇಂದ್ರವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಚುರುಕುಗೊಂಡಿದ್ದು, ಶೀಘ್ರದಲ್ಲಿ ಪ್ರವಾಸಿಗರ ಆಗಮನಕ್ಕೆ ಸಿದ್ಧತೆ ನಡೆದಿದೆ.
ಗಂಗಾವತಿ ತಾಲೂಕಿನಲ್ಲಿ ಬರುವ ಕುಮ್ಮಟದುರ್ಗಾ ಬೆಟ್ಟವನ್ನು ಪ್ರವಾಸೋಧ್ಯಮ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಪ್ರವಾಸಿಗರಿಗೆ ಕುದುರೆ ಸವಾರಿ ಮಾಡಲು ವ್ಯವಸ್ಥೆ ನಡೆದಿದೆ. ಅಲ್ಲದೇ ಪ್ರಾಯೋಗಿಕವಾಗಿ ಜಿಲ್ಲಾಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಕುದುರೆ ಸವಾರಿ ಮೂಲಕ ಕುಮ್ಮಟದುರ್ಗಾ ವೀಕ್ಷಣೆ ಮಾಡಿದರು ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಹೇಮಂತ ಕುಮಾರ ತಿಳಿಸಿದ್ದಾರೆ.
ಕುಮ್ಮಟದುರ್ಗಾ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಪ್ರವಾಸಿಗರಿಗೆ ಅನುಕೂಲವಾಗುವುದಕ್ಕೆ ಕುದುರೆ ಸವಾರಿ ಮಾಡುವುದರ ಮೂಲಕ ವೀಕ್ಷಿಸಲು ಸಿದ್ಧತೆ ನಡೆದಿದೆ. ಪ್ರಾಯೋಗಿಕವಾಗಿ ಅಧಿಕಾರಿಗಳ ತಂಡ ಕುದುರೆ ಸವಾರಿ ಮಾಡಿದ್ದಾರೆ. ಈ ಪ್ರದೇಶ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕಿದ್ದು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಚಾರಣ ಬಳಗದ ಸದಸ್ಯ ಡಾ. ಅಮರ್ ಪಾಟೀಲ್ ಹೇಳಿದ್ದಾರೆ.