ಬೆಂಗ್ಳೂರಲ್ಲಿ ದೇಶದ ಮೊದಲ ‘ಮಾಡ್ಯುಲರ್ ಐಸಿಯು ಘಟಕ’ ಲೋಕಾರ್ಪಣೆ
ಬೆಂಗಳೂರು(ಫೆ.09): ಕೊರೋನಾ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಬಲ್ಲ ಅತ್ಯಾಧುನಿಕ ಸೌಲಭ್ಯಗಳ ದೇಶದ ಮೊದಲ ‘ಮಾಡ್ಯುಲರ್ ಕಂಟೈನರ್ ಐಸಿಯು ಘಟಕ’ವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಲೋಕಾರ್ಪಣೆಗೊಳಿಸಿದ್ದಾರೆ.
ನಗರದ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗಿರುವ 100 ಹಾಸಿಗೆ ಸಾಮರ್ಥ್ಯದ ಈ ಮಾಡ್ಯುಲರ್ ಐಸಿಯು ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಮಾಡ್ಯೂಲರ್ ಐಸಿಯು ಘಟಕ ನಿರ್ಮಿಸಲಾಗಿದೆ. ಈ ಘಟಕದಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಮಾದರಿಯ ಕೆಲಸ ರಾಜ್ಯದ ಇತರೆಡೆಗೂ ವಿಸ್ತರಿಸುವ ಅಗತ್ಯವಿದೆ ಎಂದ ಸಿಎಂ
ಕೆ.ಸಿ.ಜನರಲ್ ಆಸ್ಪತ್ರೆ ಗುಣಮಟ್ಟದ ಸೇವೆಗೆ ಹೆಸರಾಗಿದೆ. ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಆವರಣದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಿಂದ 50 ಹಾಸಿಗೆ ಸಾಮರ್ಥ್ಯದ ಕ್ಯಾಥ್ ಲ್ಯಾಬ್, 50 ಹಾಸಿಯ ಟ್ರಾಮಾ ಕೇರ್ ಸೆಂಟರ್ ಹಾಗೂ 150 ಹಾಸಿಗೆ ಸಾಮರ್ಥ್ಯದ ತಾಯಿ-ಮಗು ಚಿಕಿತ್ಸಾ ಕೇಂದ್ರ ನಿರ್ಮಿಸುವುದಾಗಿ ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಮಾಡ್ಯುಲರ್ ಐಸಿಯು ಘಟಕಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿವೆ. ಈ 100 ಹಾಸಿಗೆ ಸಾಮರ್ಥ್ಯದ ಮಾದರಿ ಮಾಡ್ಯುಲರ್ ಐಸಿಯು ಘಟಕವನ್ನು ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಈ ಐಸಿಯು ಘಟಕಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಅಂತೆಯೇ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿನ ಟ್ರಾಮಾ ಕೇರ್ ಸೆಂಟರನ್ನೇ ಅಕಾಡೆಮಿಕ್ ಕ್ರಿಟಿಕಲ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದರೆ ತಜ್ಞ ಸಿಬ್ಬಂದಿಯ ಕೊರತೆ ನೀಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಶಾಸಕ ದಿನೇಶ್ ಗುಂಡೂರಾವ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.
ಸರಕು ಸಾಗಣೆಯ ಕಂಟೈನರ್ ಮಾದರಿ ಇಟ್ಟುಕೊಂಡು ಈ ಮಾಡ್ಯುಲರ್ ಐಸಿಯು ಘಟಕ ನಿರ್ಮಿಸಲಾಗಿದೆ. ಪ್ರತಿ ಐಸಿಯುಗೆ 25 ಲಕ್ಷ ರು. ವೆಚ್ಚದಂತೆ ನೂರು ಐಸಿಯು ನಿರ್ಮಿಸಲಾಗಿದೆ. ಈ ಪೈಕಿ 50ಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿದ್ದು, ದಾನಿಗಳ ನೆರವಿನಿಂದ 50 ಐಸಿಯು ನಿರ್ಮಿಸಲಾಗಿದೆ. ಈ ಐಸಿಯು ಘಟಕಗಳ ನಿರ್ವಹಣೆಗೆ ತಜ್ಞ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ನರ್ಸುಗಳು ಸೇರಿ ಒಟ್ಟು 150 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದೆ.
8 ಸಾವಿರ ಲೀಟರ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ, ಹೈ ಸ್ಪೀಡ್ ವೈಫೈ, ಪ್ರತ್ಯೇಕ ಲ್ಯಾನ್ ಕೇಬಲ್, ಎಚ್‌ಡಿ ಕ್ಯಾಮೆರಾಗಳು, ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಕಂಟೈನರ್ ಬಳಸಿ ಮಾಡ್ಯುಲರ್ ಐಸಿಯು ಘಟಕ ನಿರ್ಮಾಣದ ಪ್ರಯೋಗ ದೇಶದಲ್ಲೇ ಪ್ರಥಮವಾಗಿದೆ.