Udupi: ಮೀನುಗಾರರ ಬಲೆಗೆ ಬಿದ್ದ ಬಂಗಾರದ ಮೀನು: ಅಟ್ಲಾಂಟಿಕ್ ಮೀನು ಇಲ್ಲಿಗೆ ಹೇಗೆ ಬಂತು?
ಉಡುಪಿ (ಜ.25): ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಮೀನುಗಾರರ ಬಲೆಗೆ ಅಪರೂಪದ ಬಂಗಾರ ಬಣ್ಣದ ಮೀನೊಂದು ಬಿದ್ದಿದೆ. ಬಂಗಾರ ಬಣ್ಣದ ಅಂಜಲ್ ಮೀನು ಇದ್ದಾಗಿದ್ದು, ಸುಮಾರು 16 ಕೆಜಿ ತೂಗುತ್ತಿದೆ. ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಈ ಮೀನು ಗಾಳಕ್ಕೆ ಸಿಕ್ಕಿಹಾಕಿಕೊಂಡಿದೆ.
ಮಲ್ಪೆ ಬಂದರಿನಲ್ಲಿ ಬಂಗಾರ ಬಣ್ಣದ ಅಂಜಲ್ ಮೀನು ಕೆ.ಜಿಗೆ 600 ರೂ. ರಂತೆ ಮಾರಾಟವಾಗಿದೆ. ಈಗ ಬಂಗಾರದ ಬಣ್ಣದ ಮೀನನ್ನು ಖರೀದಿ ಮಾಡುವುದರ ಜೊತೆಗೆ ನೋಡುವುದಕ್ಕೂ ಹೆಚ್ಚಿನ ಜನರು ಆಗಮಿಸಿದ್ದಾರೆ.
ಮಲ್ಪೆಯ ಸುರೇಶ್ ಮೀನನ್ನು ಒಟ್ಟು 9,600 ಕೊಟ್ಟು ಖರೀದಿಸಿದ್ದಾರೆ. ಒಂದು ಮೀನಿನ ಮಾರಾಟದಿಂದ ಬರೋಬ್ಬರಿ ಹತ್ತು ಸಾವಿರ ರೂ. ಮೀನುಗಾರರಿಗೆ ಸಿಕ್ಕಂತಾಗಿದೆ.
ವಿಶೇಷ ಅಂಜಲ್ ಮೀನು ಹೆಚ್ಚಾಗಿ ಅಟ್ಲಾಂಟಿಕ್ ಸರೋವರದಲ್ಲಿ ಕಂಡು ಬರುತ್ತದೆ. ಆದರೆ, ಈಗ ಕರ್ನಾಟಕದ ಮೀನುಗಾರರ ಬಲೆಗೆ ಈ ವಿಶೇಷ ಮೀನು ಬಿದ್ದಿದ್ದು ಎಲ್ಲರಿಗೂ ಆಶ್ಚರ್ಯವಾಗಿದೆ.
ಪ್ರಾಕೃತಿಕ ವೈಚಿತ್ರದಿಂದಾಗಿ ಇಲ್ಲವೇ ಆನುವಂಶಿಕದಿಂದಾಗಿಯೂ ಅರಬ್ಬೀ ಸಮುದ್ರದ ಅಂಜಲ್ ಮೀನಿಗೆ ಬಂಗಾರದ ಬಣ್ಣ ಬರಲು ಸಾಧ್ಯವಿದೆ ಎಂದು ತಜ್ಜ, ಸಂಶೋಧಕ ಡಾ. ಶಿವಕುಮಾರ್ ಹರಗಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.