Night Curfew: ಊಟ ಸಿಗದ್ದಕ್ಕೆ ರೊಚ್ಚಿಗೆದ್ದ ರೈತರು: ತಡರಾತ್ರಿ ಪ್ರತಿಭಟನೆ
ಹುಬ್ಬಳ್ಳಿ(ಜ.21): ನೈಟ್ ಕರ್ಫ್ಯೂ(Night Curfew) ಹಿನ್ನೆಲೆ ರಾತ್ರಿ ಊಟ(Food) ಸಿಗದ ಕಾರಣಕ್ಕೆ ಗುರುವಾರ ರಾತ್ರಿ ಒಂದು ಗಂಟೆ ಕಾಲ ಅಮರಗೋಳ ಎಪಿಎಂಸಿ ಎದುರಿನ ಮೂರನೇ ದ್ವಾರದ ಎದುರು ರಸ್ತೆ ತಡೆದು ವಿವಿಧ ಜಿಲ್ಲೆಯ ನೂರಾರು ರೈತರು(Farmers) ಪ್ರತಿಭಟನೆ ನಡೆಸಿದರು.
ಅಮರಗೋಳ ಎಪಿಎಂಸಿಗೆ(Amargol APMC) ಒಣ ಮೆಣಸು ಮಾರಲು ಬಾಗಲಕೋಟೆ(Bagalkot), ಗದಗ(Gadag), ಧಾರವಾಡ(Dharwad), ರಾಯಚೂರು(Raichur), ಕೊಪ್ಪಳ(Koppal) ಸೇರಿದಂತೆ ವಿವಿಧ ಭಾಗದಿಂದ ರೈತರು ಆಗಮಿಸಿದ್ದರು. ಟೆಂಡರ್ ಮಾಡಿ ದರ ನಿಗದಿಸುವ ಪ್ರಕ್ರಿಯೆ ರಾತ್ರಿ 9.30ರವರೆಗೂ ನಡೆದಿದೆ.
ವ್ಯಾಪಾರ ವಿಳಂಬವಾದ ಕಾರಣಕ್ಕೆ ರೈತರು ಎಪಿಎಂಸಿ ಆವರಣದಲ್ಲಿಯೇ ವಾಸ್ತವ್ಯ ಹೂಡಿದ್ದರು. ರಾತ್ರಿ ಊಟ ಮಾಡಲು ಎಪಿಎಂಸಿ ಬಳಿಯ ಹೋಟೆಲ್‌ಗೆ(Hotel) ಆಗಮಿಸಿದಾಗ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು(Police) ಬಂದ್ ಮಾಡಲು ಸೂಚಿಸಿದ ಕಾರಣ ಹೋಟೆಲ್ ಮಾಲೀಕರು ರೈತರಿಗೆ ಊಟ ನೀಡಲು ನಿರಾಕರಿಸಿದರು. ಈ ವೇಳೆ ನಮಗೆ ಅವಾಚ್ಯವಾಗಿ ಬೈಯ್ಯಲಾಗಿದೆ ಎಂದು ರೈತ ಬಾಗಲಕೋಟೆಯ ಹುನಗುಂದ(Hungund) ರೈತ ರಸುಲ್ ಸಾಬ್ ತಹಶೀಲ್ದಾರ ದೂರಿದರು. ಈ ಕಾರಣಕ್ಕಾಗಿ ರೊಚ್ಚಿಗೆದ್ದ ರೈತರು ರಸ್ತೆಗಿಳಿದು ವಾಹನ ಸಂಚಾರ ತಡೆದು ಪ್ರತಿಭಟನೆ ಆರಂಭಿಸಿದರು.
ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ರೈತರು ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಮನವೊಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನ ವಿಫಲವಾಯಿತು. ಸುಮಾರು ಒಂದು ಕಿ.ಮೀ.ವರೆಗೂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿನಿಂತಿದ್ದವು. ಸರ್ಕಾರ ಹಾಗೂ ಕೃಷಿ ಸಚಿವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ 11.30ರವರೆಗೂ ರೈತರನ್ನು ಸಂಭಾಳಿಸುವಲ್ಲಿ ಪೊಲೀಸರು ಹೈರಾಣಾದರು. ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ ಸೇರಿ ಸ್ಥಳೀಯ ಮುಖಂಡರು ಆಗಮಿಸಿ ಊಟದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದರು. ಆನಂದ ಮಾಸ್ತಿ ನಿಡಗುಂದಿಕೊಪ್ಪ, ಮೆಹಬೂಬ್ ಸಾಬ್ ಮುಲ್ಲಾ ರೋಣ, ಶಿವಾನಂದ ಹೊಸಮನಿ, ಮಂಜು ಸರ್ವಿ, ಮಲ್ಲಿಕಾರ್ಜುನ ಸರ್ವಿ, ಸಿದ್ಧಪ್ಪ ಸರ್ವಿ, ಸುನೀಲ ಮಾಸ್ತಿ ಸೇರಿದಂತೆ ನೂರಾರು ರೈತರಿದ್ದರು.