ಕೊರೋನಾ ಸೋಂಕಿತರ ಜತೆ ವಿಡಿಯೋ ಸಂವಾದ: ರೋಗಿಗಳಿಗೆ ಧೈರ್ಯ ತುಂಬಿದ DCM ಅಶ್ವತ್ಥ ನಾರಾಯಣ
ರಾಮನಗರ(ಜೂ.29): ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಧೈರ್ಯ ತುಂಬಿದ್ದಾರೆ. ಅಡ್ಮಿನ್ ಬ್ಲಾಕಿನಲ್ಲಿ ಕೂತು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಜತೆ ಮಾತನಾಡಿದ ಅವರು, ರೋಗಕ್ಕೆ ಹೆದರಬೇಡಿ. ನಿಮಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಸರ್ಕಾರ ನಿಮ್ಮೊಂದಿಗಿದೆ ಎಂದು ಧೈರ್ಯ ತುಂಬಿದ್ದಾರೆ.
ತಾವು ತಿಂಗಳ ಗರ್ಭಿಣಿಯಾಗಿದ್ದು, ತಮಗಿಲ್ಲಿ ಉತ್ತಮವಾದ ಚಿಕಿತ್ಸೆ ದೊರೆಯುತ್ತಿದೆ. ವೈದ್ಯರು ಮತ್ತು ನರ್ಸ್‌ಗಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದು ಡಿಸಿಎಂ ಅವರಿಗೆ ತಿಳಿಸಿದರು. ಹಾಗೆಯೇ ಮತ್ತೋರ್ವ ಕೊರೋನಾ ರೋಗಿ ಕೂಡ ಚಿಕಿತ್ಸೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರಲ್ಲದೆ, ತಮ್ಮ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದರು.
ಇದೊಂದು ಸೋಂಕಿನ ಕಾಯಿಲೆಯಾಗಿದ್ದು, ಗಂಭೀರವಾಗಿದೆ. ಯಾವುದೇ ಕಾರಣಕ್ಕೂ ಎದೆಗುಂದಬಾರದು. ವೈದ್ಯರು ಹೇಳುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಜನರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಉಪ ಮುಖ್ಯಮಂತ್ರಿ ಹಿತವಚನ ಹೇಳಿದರು.
ಸರ್ಕಾರದ ನಿಯಮದಂತೆ ರೋಗಿಗಳ ವೆಚ್ಚವನ್ನು ಸರ್ಕಾರವೇ ಭರಸಲಿದೆ. ಆ ಮೊತ್ತವನ್ನು ಆಸ್ಪತ್ರೆಗಳಿಗೆ ಪಾವತಿ ಮಾಡಲಿದೆ. ಯಾವುದೇ ಕಾರಣಕ್ಕೂ ಸೋಂಕಿತರಿಗೆ ತೊಂದರೆಯಾಗಲು ಬಿಡುವುದಿಲ್ಲ. ಸದ್ಯದ ಸ್ಥಿತಿ ನೋಡಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧವಾಗಿದೆ. ತಕ್ಷಣಕ್ಕೆ ನಾಲ್ಕು ಆಂಬುಲೆನ್ಸ್ ಅಗತ್ಯವಿದ್ದು, ಖರೀದಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ ಡಾ.ಅಶ್ವತ್ಥನಾರಾಯಣ
ಕೊರೋನಾ ಸೋಂಕಿತ ರೋಗಿಗಳಿಗೆ ಜಿಲ್ಲೆಯಲ್ಲಿ ಮೀಸಲಾಗಿರುವ ರಾಜರಾಜೇಶ್ವರಿ ಹಾಗೂ ದಯಾನಂದ ಸಾಗರ್ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ಕೆಂಗೇರಿಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಕನಕಪುರ ರಸ್ತೆಯ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಅಶ್ವತ್ಥನಾರಾಯಣ ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿ ತಕ್ಷಣಕ್ಕೆ ಎರಡೂ ಆಸ್ಪತ್ರೆಗಳಲ್ಲಿ 660 ಬೆಡ್‌ಗಳನ್ನು ಸಜ್ಜುಗೊಳಿಸಿದರು.
ಮೊದಲು ಈ ಕಾಲೇಜಿಗೆ ಜಿಲ್ಲಾಧಿಕಾರಿ ಅರ್ಚನಾ, ಜಿಪಂ ಸಿಇಒ ಇಕ್ರಂ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ ಅವರೊಂದಿಗೆ ಭೇಟಿ ನೀಡಿದ ಡಿಸಿಎಂ, ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಜತೆ ಮಾತುಕತೆ ನಡೆಸಿದರು. ಇಲ್ಲಿ ಜಿಲ್ಲೆಯ 600 ರೋಗಿಗಳಿಗೆಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದೆ ಎಂದು ತಿಳಿಸಿದರು.
ಸದ್ಯಕ್ಕೆ ಕಾಲೇಜಿನ ಆಸ್ಪತ್ರೆಯಲ್ಲಿರುವ 1600 ಬೆಡ್‌ಗಳ ಪೈಕಿ 600 ಬೆಡ್ಡುಗಳನ್ನು ಜಿಲ್ಲೆಯ ರೋಗಿಗಳಿಗೆ ಮೀಸಲಿಡಲಾಗಿದೆ. ಐಸಿಯುನಲ್ಲೂ 110 ಬೆಡ್ಡುಗಳನ್ನು ನಿಗದಿ ಮಾಡಲಾಗಿದ್ದು, ಇಲ್ಲಿ ವೆಂಟಿಲೇಟರ್ ವ್ಯವಸ್ಥೆಯೂ ಇದೆ. ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ತಮ್ಮಲ್ಲಿರುವ 150 ವೈದ್ಯರನ್ನು ರಾಮನಗರ ಜಿಲ್ಲೆಗೆ ಒದಗಿಸಲು ತಯಾರಿದ್ದಾರೆ. 400 ನರ್ಸ್ ಗಳ ಪೈಕಿ 200 ಮಂದಿ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದು, 20 ಮಂದಿಯ ಸೇವೆಯನ್ನೂ ಜಿಲ್ಲೆಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರೆಂದು ಡಿಸಿಎಂ ಹೇಳಿದರು.
ಸದ್ಯಕ್ಕೆ 34 ಕೋವಿಡ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆ ಪೈಕಿ 17 ಮಂದಿ ರಾಮನಗರ ಜಿಲ್ಲೆಯವರು. ಆಸ್ಪತ್ರೆಯ ಸುತ್ತ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸಮರ್ಪಕವಾಗಿ ಸ್ಯಾನಿಟೈಸ್ ಮಾಡಿ ಸ್ವಚ್ಛತೆ ಕಾಪಾಡಬೇಕು. ಕೂಡಲೇ ನೋಡಲ್ ಅಧಿಕಾರಿಯನ್ನು ನೇಮಿಸಿ ಆಸ್ಪತ್ರೆ ಬಳಿ ಪೊಲೀಸ್ ಔಟ್‌ಪೋಸ್ವ್ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.