ಪೊಲೀಸ್ ವ್ಯವಸ್ಥೆಗೆ 100 ಕೋಟಿ ಅನುದಾನ: ಸಿಎಂ ಯಡಿಯೂರಪ್ಪ
ಬೆಂಗಳೂರು(ನ.28): ರಾಜ್ಯ ಪೊಲೀಸ್ ವ್ಯವಸ್ಥೆಯ ಆಧುನೀಕರಣಕ್ಕೆ ಮುಂದಿನ ಆಯವಯ್ಯದಲ್ಲಿ .100 ಕೋಟಿ ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ನಗರದ ಮಡಿವಾಳದಲ್ಲಿ ಶುಕ್ರವಾರ ನಡೆದ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲದ ಕಚೇರಿ ಆವರಣದಲ್ಲಿ ನಿರ್ಮಿಸಿರುವ ‘ನ್ಯಾಯ ವಿಜ್ಞಾನ ಪ್ರಯೋಗಾಲಯದ ನಿರ್ದೇಶನಾಲಯ’ದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಪೊಲೀಸ್ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ದೇಶದಲ್ಲಿ ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆ ಸುಭದ್ರವಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾಹನ ಖರೀದಿ ಸೇರಿದಂತೆ ಪೊಲೀಸ್ ಬಲವರ್ಧನೆಗೆ ಸರ್ಕಾರ ಮುಕ್ತವಾಗಿ ಆರ್ಥಿಕ ನೆರವು ಒದಗಿಸಿದೆ. ಮುಂದಿನ ಬಜೆಟ್‌ನಲ್ಲಿ ಸಹ ಗೃಹ ಸಚಿವರ ಪ್ರಸ್ತಾಪಿಸಿರುವ ಆಧುನೀಕರಣಕ್ಕೆ 100 ಕೋಟಿ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಪೊಲೀಸರ ಮೇಲೆ ಅಪರಾಧ ನಿಯಂತ್ರಣ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಬಹುಮುಖ್ಯ ಜವಾಬ್ದಾರಿ ಇದೆ. ಪೊಲೀಸರ ತನಿಖೆಗೆ ಅನುಕೂಲತೆ ದೃಷ್ಟಿಯಿಂದ ನ್ಯಾಯ ವಿಜ್ಞಾನ ಪ್ರಯೋಗಾಲಯ ಕಾರ್ಯನಿರ್ವಹಿಸಲಿ ಎಂದು ಮುಖ್ಯಮಂತ್ರಿಗಳು ಆಶಿಸಿದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸೈಬರ್ ಅಪರಾಧ ನಿಯಂತ್ರಣದಲ್ಲಿ ರಾಜ್ಯದ ಪೊಲೀಸರು ಹೆಚ್ಚು ಪ್ರಗತಿ ಸಾಧಿಸಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿ ಸೈಬರ್ ಕ್ರೈಂ ಬಗ್ಗೆ ದೂರುಗಳನ್ನು ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದರು.
ದೇಶದಲ್ಲೇ ಕರ್ನಾಟಕದಲ್ಲಿ ಅತ್ಯಾಧುನಿಕ ಎಫ್‌ಎಸ್‌ಎಲ್ ಪ್ರಯೋಗಾಲಯ ಆರಂಭಿಸಲಾಗಿದೆ. ಈವರೆಗೆ ಡಿಎನ್‌ಎ ಎಕ್ಸಾಟ್ರಕ್ಷನ್ ಮತ್ತು ಬೆರಳಚ್ಚು ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗಿದ್ದ ಪ್ರಯೋಗಾಲಯವನ್ನು ಆಧುನೀಕರಣಗೊಳಿಸಲಾಗಿದೆ. ಡಿಜಿಟಲ್ ನಾರ್ಕೊಟಿಕ್ಸ್ ಡಿಟೆಕ್ಷನ್ ಮತ್ತು ಅತ್ಯಾಧುನಿಕವಾದ ಸೈಬರ್ ಅಪರಾಧ ಪ್ರಯೋಗಾಲಯವನ್ನಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಅಪರಾಧಗಳು ನಡೆದಾಗ ಘಟನಾ ಸ್ಥಳಕ್ಕೆ ಖುದ್ದು ಎಫ್‌ಎಸ್‌ಎಲ್ ಪರಿಣಿತ ತಜ್ಞರೇ ತೆರಳಿ ಪರಿಶೀಲಿಸುವಂತೆ ಸೂಚಿಸಲಾಗಿದೆ. ಇದರಿಂದ ಬಹಳಷ್ಟುಅಪರಾಧಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಆರ್.ರಾಮಲಿಂಗಾರೆಡ್ಡಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯೆಲ್, ನಿವೃತ್ತ ಡಿಜಿಪಿ ನೀಲಮಣಿ ಎನ್.ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.