ಹಾಸನದ ಭೀಮ ಬಂದ ಓಡ್ರೋ ಓಡ್ರೋ; ಮೈಕ್ ಹಿಡಿದು ಸಾರುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ!
ಹಾಸನ ಜಿಲ್ಲೆಯ ಅಂಕಿಹಳ್ಳಿ ಪೇಟೆ ಗ್ರಾಮದಲ್ಲಿ ಭೀಮ ಎಂಬ ಕಾಡಾನೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆನೆ ಬೆಳೆಗಳನ್ನು ತಿಂದು ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ಹಿಂಬಾಲಿಸುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಪ್ರತಿ ವರ್ಷ ಕಾಡಾನೆಗಳ ದಾಳಿಗೆ ಹತ್ತಾರು ಜನರು ಬಲಿಯಾಗುತ್ತಲೇ ಇರುತ್ತಾರೆ. ರೈತರು, ತೋಟದ ಕೆಲಸಕ್ಕೆ ಹೋದ ಕಾರ್ಮಿಕರು, ವಾಹನ ಸವಾರರು ಸೇರಿದಂತೆ ಹಲವರು ಕಾಡಾನೆ ದಾಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಕಾಡಾನೆಗಳ ಹಾವಳಿ ಜಮೀನುಗಳಿಗೆ ಸೀಮಿತವಾಗದೇ ನೇರವಾಗಿ ಊರಿಗೂ ಕಾಲಿಟ್ಟಿದೆ. ಹಾಸನದ ಭೀಮ ಎನ್ನುವ ಕಾಡಾನೆ ಇದೀಗ ಹಳ್ಳಿಯೊಂದಕ್ಕೆ ಬಂದಿದ್ದು, ಗಾಂಭೀರ್ಯವಾಗಿ ನಡೆಯುತ್ತಾ ಅಕ್ಕ ಪಕ್ಕದಲ್ಲಿ ಸಿಗುವ ಆಹಾರವನ್ನು ತಿನ್ನುತ್ತಾ ಸುತ್ತಾಡಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂಕಿಹಳ್ಳಿ ಪೇಟೆ ಗ್ರಾಮದಲ್ಲಿ ಗುರುವಾರ ಭೀಮ ಎನ್ನುವ ಆನೆ ಓಡಾಡಿದೆ. ಇನ್ನು ಕಾಡಾನೆಗಳ ಚಲನವಲ ಗಮನಸಿ ಅವುಗಳ ಹಿಂದೆ ಸುತ್ತುತ್ತಿರೋ ಅರಣ್ಯ ಇಲಾಖೆಯ ಸಿಬ್ಬಂದಿ ಸುತ್ತಾಡುತ್ತಾ ಜನರು ಕಾಡಾನೆಯ ದಾಳಿಗೆ ತುತ್ತಾಗದಂತೆ ಎಚ್ಚರಿಕೆವಹಿಸುತ್ತಿದ್ದಾರೆ. ಇನ್ನು ಜನರಿಗೆ ಕಾಡಾನೆರ ಬರುತ್ತಿದೆ, ಅದರ ಕಣ್ಣಿಗೆ ಬೀಳದಂತೆ ಹೋಗಿ ಎಂದು ಮೈಕ್ ಮೂಲಕ ಸಾರುತ್ತಿದ್ದಾರೆ.
ಅಂಕಿಹಳ್ಳಿ ಪೇಟೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆದು ಸಾಗಿದ ಭೀಮ ಎಂಬ ಒಂಟಿ ಸಲಗವನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳನ್ನು ಮನೆಯೊಳಗೆ ಹಿಡಿದು ಕೂರಿಸಿದ್ದಾರೆ. ಇನ್ನು ಸಣ್ಣಪುಟ್ಟ ಪ್ರಾಣಿಗಳಾದ ಆಡು, ಕುರಿ ಹಾಗೂ ಹಸು ಕರುಗಳನ್ನು ಒಳಗೆ ಕಟ್ಟಿಕೊಂಡಿದ್ದಾರೆ. ಈ ಮೂಲಕ ಆನೆಯ ಕಣ್ಣಿಗೆ ಬೀಳದಂತೆ ರಕ್ಷಣೆ ಪಡೆದುಕೊಂಡಿದ್ದಾರೆ. ಜೊತೆಗೆ, ಊರಿನ ರಸ್ತೆಯಲ್ಲಿ ಒಬ್ಬೊಬ್ಬರೇ ಓಡಾಡದಂತೆ ನಿಗಾವಹಿಸುತ್ತಿದ್ದಾರೆ.
ಕಾಡಿನಿಂದ ಗ್ರಾಮಕ್ಕೆ ನುಗ್ಗಿದ ಆನೆಯನ್ನು ಹಿಂಬಾಲಿಸಿದ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಹಾಗೂ ಗ್ರಾಮದ ಕೆಲವು ಯುವಕರು ಆನೆ ದಾಳಿಗೆ ಯಾರೊಬ್ಬರೂ ಒಳಗಾಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಎಲ್ಲೆಡೆ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಯಾರೇ ಆಗಲಿ ಆನೆಯ ಮುಂದೆ ಬರದಂತೆ ಜಾಗ್ರತೆವಹಿಸಿ ಆನೆಯನ್ನು ಗ್ರಾಮದಿಂದ ಹೊರಗೆ ಓಡಿಸಲು ಕಷ್ಟಪಟ್ಟಿದ್ದಾರೆ.
ಅಂಕಿಹಳ್ಳಿ ಪೇಟೆ ಗ್ರಾಮದಲ್ಲಿ ಮನೆಗಳ ಮುಂದೆ ಹಾಕಿದ್ದ ಕಬ್ಬನ್ನು ಮುರಿದು ತಿನ್ನುತ್ತ ರಸ್ತೆಗಳಲ್ಲಿ ಸಾಗಿದ ಭೀಮ ಆನೆ, ಹಲವು ದಿನಗಳಿಂದ ಗ್ರಾಮದ ತೋಟ, ಹೊಲಗಳಲ್ಲಿ ಬೆಳೆದ ಬೆಳೆಗಳನ್ನೂ ತಿಂದು ತೇಗುತ್ತಿದೆ. ಇನ್ನು ಜನರ ಮೇಲೆ ದಾಳಿ ಮಾಡದೇ ತನಗೆ ಸಿಕ್ಕಿದ್ದೆಲ್ಲವನ್ನೂ ತಿನ್ನುತ್ತಾ ಸಾಗಿದ ಭೀಮ ಆನೆಯನ್ನು ನೋಡಿದ ಜನರು ಭಯಭೀತರಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಆಲೂರು, ಸಕಲೇಶಪುರ, ಬೇಲೂರು ತಾಲ್ಲೂಕಿನ ಜನರು ಕಾಡಾನೆಗಳ ಹಾವಳಿಯಿಂದ ಬೇಸತ್ತಿದ್ದಾರೆ. ಇಲ್ಲಿನ ಕೆಲವು ಗ್ರಾಮಗಳ ಬಳಿಯ ಕಾಫಿ ತೋಟ, ರೈತರ ಜಮೀನುಗಳಲ್ಲೇ ಬೀಡು ಬಿಟ್ಟಿರೋ ಕಾಡಾನೆಗಳು, ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಇನ್ನು ರೈತರು ಹಾಗೂ ಕಾರ್ಮಿಕರು ಜಮೀನುಗಳಿಗೆ ಹೋಗಲು ಹೆದರುತ್ತಿದ್ದಾರೆ.