- Home
- Karnataka Districts
- ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ಹಗರಣ ಆರೋಪ, 9,700 ಪುಟಗಳ ದಾಖಲೆ ಸಹಿತ ದೂರು ಕೊಟ್ಟ ರಮೇಶ್ !
ಬಿಬಿಎಂಪಿಯಲ್ಲಿ 40 ಸಾವಿರ ಕೋಟಿ ಹಗರಣ ಆರೋಪ, 9,700 ಪುಟಗಳ ದಾಖಲೆ ಸಹಿತ ದೂರು ಕೊಟ್ಟ ರಮೇಶ್ !
ಬಿಬಿಎಂಪಿ ಇಲಾಖೆಯಲ್ಲಿ ಸುಮಾರು ₹40 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಈ ಹಗರಣದಲ್ಲಿ 255 ಅಧಿಕಾರಿಗಳು, 437 ಬಿಲ್ಡರ್‌ಗಳು ಭಾಗಿಯಾಗಿದ್ದು, 22 ಲಕ್ಷ ಗ್ರಾಹಕರಿಗೆ ವಂಚಿಸಲಾಗಿದೆ ಎಂದು ಲೋಕಾಯುಕ್ತ ಮತ್ತು ಇಡಿಗೆ ದೂರು ನೀಡಿದ್ದಾರೆ.

ಪಾಲಿಕೆಯಲ್ಲಿ ₹40 ಸಾವಿರ ಕೋಟಿ ಅಕ್ರಮ: ರಮೇಶ್
ಬೆಂಗಳೂರು: ಹಿಂದಿನ ಬಿಬಿಎಂಪಿ ನಗರ ಯೋಜನಾ ಇಲಾಖೆಯಿಂದ ನಕಲಿ ಪ್ರಾರಂಭಿಕ ಪ್ರಮಾಣಪತ್ರ(ಸಿಸಿ) ಮತ್ತು ಸ್ವಾಧೀನಾನುಭವ ಪತ್ರ(ಓಸಿ) ನೀಡಿ 22 ಲಕ್ಷ ಗ್ರಾಹಕರಿಗೆ ವಂಚಿಸಿ, ಸುಮಾರು 40 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

9,700 ಪುಟಗಳ ದಾಖಲೆ ಸಹಿತ ದೂರು
ಈ ಹಗರಣ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಬಿಬಿಎಂಪಿಯ 255 ಮಂದಿ ಅಧಿಕಾರಿಗಳು ಮತ್ತು 437 ಮಂದಿ ಬಿಲ್ಡರ್‌ಗಳ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಮತ್ತು ಲೋಕಾಯುಕ್ತಕ್ಕೆ 9,700 ಪುಟಗಳ ದಾಖಲೆ ಸಹಿತ ದೂರು ನೀಡಿದ್ದಾರೆ. ಈ ಹಗರಣ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐ/ಸಿಐಡಿ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಬಿಬಿಎಂಪಿ ಎಂಟು ವಲಯಗಳ ವ್ಯಾಪ್ತಿಯಲ್ಲಿ ಏನಾಗಿದೆ?
ಹಿಂದಿನ ಬಿಬಿಎಂಪಿ ಎಂಟು ವಲಯಗಳ ವ್ಯಾಪ್ತಿಯಲ್ಲಿ ಕಳೆದ 16 ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡಿರುವ ಬೃಹತ್ ಕಟ್ಟಡಗಳಿಗೆ ಪಾಲಿಕೆಯ ನಗರ ಯೋಜನೆ ಇಲಾಖೆಯಿಂದ 4,381 ಸಿಸಿ ಮತ್ತು 4,587 ಓಸಿ ನೀಡಲಾಗಿದೆ. ಅಂತೆಯೆ 71,169 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಪಡೆಯಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ ಕ್ರೆಡೈ ಮತ್ತು ಬ್ರೈ ಸಂಸ್ಥೆಗಳಲ್ಲಿ ಸದಸ್ಯರಾಗಿರುವ 437 ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಗಳು ನಿರ್ಮಿಸಿರುವ 50ಕ್ಕೂ ಹೆಚ್ಚಿನ ಯೂನಿಟ್‌ಗಳನ್ನು ಹೊಂದಿರುವ ವಸತಿ ಸಂಕೀರ್ಣಗಳ ಸಂಖ್ಯೆಯೇ ಸುಮಾರು 25 ಸಾವಿರಕ್ಕೂ ಹೆಚ್ಚಿದೆ. ಈ 25 ಸಾವಿರಕ್ಕೂ ಹೆಚ್ಚಿನ ವಸತಿ ಸಂಕೀರ್ಣಗಳಲ್ಲಿ ಸುಮಾರು 22 ಲಕ್ಷ ಯೂನಿಟ್‌ಗಳಿವೆ ಎಂದು ತಿಳಿಸಿದ್ದಾರೆ.
ಶೇ.95ರಷ್ಟು ಕಟ್ಟಡಗಳಿಗೆ ನಕಲಿ ಸಿಸಿ, ಓಸಿ
ಮುಂದುವರೆದು, ನಗರದಲ್ಲಿ 98 ಟೆಕ್ ಪಾರ್ಕ್‌ಗಳು, 3,876 ಐಟಿ ಕಂಪನಿಗಳು, 103 ಬಿಟಿ ಕಂಪನಿಗಳು, 4,500ಕ್ಕೂ ಹೆಚ್ಚು ಬೃಹತ್ ವಾಣಿಜ್ಯ ಸಂಕೀರ್ಣಗಳು, 217 ಮಾಲ್‌ಗಳು, 1.10 ಲಕ್ಷ ಕೈಗಾರಿಕಾ ಕಟ್ಟಡಗಳು, 540 ಸ್ಟಾರ್ ಹೋಟೆಲ್‌ಗಳು, 2,850 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು/ ನರ್ಸಿಂಗ್ ಹೋಮ್‌ಗಳು ಮತ್ತು 1,350 ಕಲ್ಯಾಣ ಮಂಟಪಗಳಿವೆ. ಈ ಬೃಹತ್ ಕಟ್ಟಡಗಳ ಪೈಕಿ ಶೇ.95ರಷ್ಟು ಕಟ್ಟಡಗಳಿಗೆ ನಕಲಿ ಸಿಸಿ ಮತ್ತು ಓಸಿ ನೀಡಲಾಗಿದೆ. ಸುಮಾರು 25 ಸಾವಿರಕ್ಕೂ ಹೆಚ್ಚಿನ ವಸತಿ ಸಂಕೀರ್ಣಗಳಲ್ಲಿರುವ 22 ಲಕ್ಷ ಫ್ಲ್ಯಾಟ್‌ಗಳನ್ನು ಕ್ರಯಕ್ಕೆ ಪಡೆದಿರುವ ಶೇ.95ಕ್ಕೂ ಹೆಚ್ಚು ಗ್ರಾಹಕರನ್ನು ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಲ್ಡರ್ ಮಾಫಿಯಾದೊಂದಿಗೆ ಅಧಿಕಾರಿಗಳು ಭಾಗಿ
ಈ ಬಿಲ್ಡರ್‌ಗಳು ಪಾಲಿಕೆ ನಗರ ಯೋಜನೆ ವಿಭಾಗದ ಅಧಿಕಾರಿಗಳಿಗೆ ನಿಗದಿತ ಶುಲ್ಕ ಪಾವತಿಸುವ ಬದಲು ಲಂಚದ ರೂಪದಲ್ಲಿ ಶೇ.25ರಷ್ಟು ಹಣ ನೀಡಿ ತಾವು ನಿರ್ಮಿಸಿದ ಕಟ್ಟಡಗಳಿಗೆ ಸಿಸಿ ಮತ್ತು ಓಸಿ ಪಡೆದಿದ್ದಾರೆ. ಈ ಮುಖಾಂತರ ತಮ್ಮ ಸಂಸ್ಥೆಯನ್ನು ನಂಬಿ ಕ್ರಯಕ್ಕೆ ಫ್ಲ್ಯಾಟ್ ಪಡೆದ ಮುಗ್ದ ಗ್ರಾಹಕರನ್ನು ವಂಚಿಸಿದ್ದಾರೆ. ಬಿಲ್ಡರ್ ಮಾಫಿಯಾ ಮತ್ತು ನಗರ ಯೋಜನೆ ಇಲಾಖೆಯ ಪರಮ ಭ್ರಷ್ಟ ಅಧಿಕಾರಿಗಳಿಂದ ಕಳೆದ 16 ವರ್ಷಗಳ ಅವಧಿಯಲ್ಲಿ ಪಾಲಿಕೆಗೆ ಸುಮಾರು 40 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ವಂಚನೆಯಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

