ಗಂಗಾವತಿ: ಕೊರೋನಾ ಜಾಗೃತಿಗಾಗಿ ಅಂಗನವಾಡಿ ಕಾರ್ಯಕರ್ತೆಯ ಫ್ರೀ ಮಾಸ್ಕ್ ಸೇವೆ
ರಾಮಮೂರ್ತಿ ನವಲಿ
ಗಂಗಾವತಿ(ಮೇ.03): ಈ ಕೊರೋನಾ ಸಂಕಷ್ಟದಲ್ಲಿ ಅಂಗನವಾಡಿ ಕಾರ್ಯಕರ್ತೆ ಹನುಮಮ್ಮ ತಮ್ಮ ಸ್ವಂತ ಕರ್ಚಿನಲ್ಲಿ ನಿರಾಶ್ರಿತರು, ಅನಾಥರು ಇನ್ನಿತರರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ಕನಕಗಿರಿ ತಾಲೂಕಿನ ನವಲಿ ತಾಂಡಾದ ಅಂಗನವಾಡಿ ಕೇಂದ್ರ-2 ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹನುಮಮ್ಮ ಮಂಜುನಾಥ ಅವರು ಪ್ರತಿ ದಿನ 200 ಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ವಿತರಿಸುತ್ತಿದ್ದಾರೆ. ಇದುವರೆಗೆ 2 ಸಾವಿರಕ್ಕೂ ಹೆಚ್ಚು ಮಾಸ್ಕ್ ವಿತರಿಸಿದ್ದಾರೆ.
ಕಳೆದ ವರ್ಷ ಕೊರೋನಾ ಸಂದರ್ಭದಲ್ಲೂ ಸಂಘ -ಸಂಸ್ಥೆಗಳು, ಪೊಲೀಸ್, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಸುಮಾರು 5 ಸಾವಿರ ಮಾಸ್ಕ್ ಉಚಿತವಾಗಿ ವಿತರಿಸಿದ್ದರು. ಜೊತೆಗೆ ಸ್ಯಾನಿಟೈಸರ್ ಸಹ ನೀಡಿದ್ದರು.
ಕಳೆದ 11 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕೆಲಸದೊಂದಿಗೆ ಸಮಾಜ ಸೇವೆ ಮಾಡೋಣ ಎನ್ನುವ ಸಂಕಲ್ಪ ಮಾಡಿದ್ದಾರೆ.
ತಮ್ಮ ಪತಿಯ ಜೊತೆ ಬೈಕ್‌ನಲ್ಲಿ ತೆರಳಿ ಗಂಗಾವತಿ ನಗರಸಭೆ ವತಿಯಿಂದ ನಡೆಯುವ ನಿರಾಶ್ರಿತರ ಕೇಂದ್ರ, ರಸ್ತೆ ಬದಿ ವ್ಯಾಪಾರಿಗಳು, ಭಿಕ್ಷುಕರು, ನಿರಾಶ್ರಿತರಿಗೆ ಮಾಸ್ಕ್ ನೀಡುತ್ತಿದ್ದಾರೆ.
ಭಗವಂತ ನೀಡಿದ ಶಕ್ತಿಯಲ್ಲಿ ಸಮಾಜಕ್ಕೆ ಏನಾದರೂ ಮಾಡೋಣ ಎನ್ನುವ ನಿರ್ಧಾರದಿಂದ ಮನೆಯಲ್ಲಿ ಮಾಸ್ಕ್ ತಯಾರಿಸಿ ನಿರಾಶ್ರಿತರಿಗೆ, ಬಡ ಜನಾಂಗಕ್ಕೆ ವಿತರಿಸುತ್ತಿದ್ದೇನೆ. ಕೊರೋನಾ ಸೊಂಕು ನಿವಾರಣೆಯಾಗಿ ಜನರ ರಕ್ಷಣೆಯಾದರೆ ಅದೇ ನನಗೆ ತೃಪ್ತಿ ಎಂದು ಅಂಗನವಾಡಿ ಕಾರ್ಯಕರ್ತ ಹನುಮಮ್ಮ ನಾಯಕ ತಿಳಿಸಿದ್ದಾರೆ,