ಎಚ್‌ಎಂಪಿವಿ ತಡೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳನ್ನು ಹೇಳಿದ WHO ಮಾಜಿ ಮುಖ್ಯ ವಿಜ್ಞಾನಿ
ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್, ಎಚ್‌ಎಂಪಿವಿ ವೈರಸ್‌ನಿಂದ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸಾಮಾನ್ಯ ಶೀತ ಮತ್ತು ಜ್ವರದಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಮೂರು ಶಿಶುಗಳಲ್ಲಿ ಈ ವೈರಸ್ ಪತ್ತೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿಯಾಗಿ ಕೆಲಸ ಮಾಡಿದ್ದ ಸೌಮ್ಯಾ ಸ್ವಾಮಿನಾಥನ್ ಹೆಚ್‌ಎಂಪಿವಿ ಬಗ್ಗೆ ಭಯಪಡಬೇಕಿಲ್ಲ ಎಂದು ಹೇಳಿದ್ದಾರೆ. ಈ ವೈರಸ್ ಹಿಂದಿನಿಂದಲೂ ಇದ್ದು, ಉಸಿರಾಟದ ಸಮಸ್ಯೆಯನ್ನುಂಟು ಮಾಡುತ್ತದೆ. ಇದು ಸೌಮ್ಯ ರೋಗದ ಲಕ್ಷಣಗಳನ್ನು ಹೊಂದಿರುತ್ತದೆ ಎಂದಿದ್ದಾರೆ.
ಸಾಮಾನ್ಯವಾಗಿ ಜನರು ಶೀತ ಮತ್ತು ಜ್ವರಕ್ಕೆ ತೆಗೆದುಕೊಳ್ಳುವಂತಹ ಮುನ್ನೇಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತ ಇಲ್ಲಿಯೂ ನಿಗಾವಹಿಸಬೇಕಾಗುತ್ತದೆ ಎಂದು ಸೌಮ್ಯಾ ಸ್ವಾಮಿನಾಥನ್ ಸಲಹೆ ನೀಡಿದ್ದಾರೆ.
ಉದಾಹರಣೆಗೆ ಮಾಸ್ಕ್ ಧರಿಸುವುದು, ಜನದಟ್ಟಣೆಯಿಂದ ದೂರ ಇರುವುದು, ಸಾಮಾಜಿಕ ಅಂತರತ ಕಾಯ್ದುಕೊಳ್ಳುವುದು, ಕೈ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು. ಗಂಭೀರ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಯಾವುದೇ ರೋಗ ಕಾಣಿಸಿಕೊಂಡ ಬಳಿಕ ಎಚ್ಚೆತ್ತುಕೊಳ್ಳುವ ಬದಲು, ಅದು ಬರೋದಕ್ಕೂ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.
ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಸೋಮವಾರ ಮೂರು ಶಿಶುಗಳಲ್ಲಿ ಈ ವೈರಸ್ ದೃಢಪಟ್ಟಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಯಿಂದ ಉಸಿರಾಟದ ಸಮಸ್ಯೆ ಇರೋ ಪ್ರಕರಣಗಳಲ್ಲಿಯೇ ವೈರಸ್ ದೃಢವಾಗಿದೆ. ಆದ್ರೆ ಯಾವುದೇ ರೋಗಿಗಳಿಗೆ ಅಂತರರಾಷ್ಟ್ರೀಯ ಪ್ರಯಾಣ ಮಾಡಿರುವ ಹಿನ್ನೆಲೆ ಇಲ್ಲ.
ಚೀನಾದಲ್ಲಿ ವೇಗವಾಗಿ ಹರಡುತ್ತಿರುವ ವೈರಸ್ ಬಗ್ಗೆ ಆರೋಗ್ಯ ಸಚಿವಾಲಯ ನಿಗಾವಹಿಸಿದೆ. ಇದು ಹೊಸ ವೈರಸ್ ಅಲ್ಲ. ಜನರು ಆತಂಕಗೊಳಗಾಗೋದು ಬೇಕಿಲ್ಲ. ಆರೋಗ್ಯ ಸಚಿವಾಲಯ ಎಲ್ಲದಕ್ಕೂ ಸಿದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ.