ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ನಂ.1, ಇಲ್ಲಿದೆ ಅತೀ ಹೆಚ್ಚು ಗಳಿಕೆ ಹೊಂದಿರುವ ಟಾಪ್ 5 ರೈಲು!
ಲಕ್ಷಾಂತರ ಜನರಿಗೆ ಜೀವನಾಡಿಯಾಗಿರುವ ಭಾರತೀಯ ರೈಲ್ವೆ ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಆದರೆ ರಾಷ್ಟ್ರದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಭಾರತದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಟಾಪ್ 5 ರೈಲುಗಳು ಯಾವುದು?
ಭಾರತೀಯ ರೈಲ್ವೆ... ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಕರೆದೊಯ್ಯುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಶತಮಾನಗಳ ಇತಿಹಾಸ ಹೊಂದಿರುವ ಭಾರತೀಯ ರೈಲ್ವೆ ಜನರ ಜೀವನಾಡಿಗೆ ಹತ್ತಿರವಾಗಿದೆ. ಅನೇಕರಿಗೆ ರೈಲು ಪ್ರಯಾಣ ಎಂದರೆ ಕೇವಲ ಪ್ರಯಾಣವಲ್ಲ...ಅದು ಜೀವನವೂ ಹೌದು, ಭಾವನಾತ್ಮಕ ಸಂಬಂಧವೂ ಹೌದು. ಭಾರತೀಯರ ಬದುಕಿನ ಭಾಗವಾಗಿರುವ ಭಾರತೀಯ ರೈಲ್ವೆ ದೇಶದ ಆರ್ಥಿಕತೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಯಾಣಿಕರ ಸಾರಿಗೆ ಜೊತೆಗೆ ಸರಕು ಸಾಗಣೆಯನ್ನೂ ಭಾರತೀಯ ರೈಲ್ವೆ ಕೈಗೊಂಡಿದೆ.
ಇತರೆ ಸಾರಿಗೆ ವ್ಯವಸ್ಥೆಗಳಿಗೆ ಹೋಲಿಸಿದರೆ ರೈಲು ಪ್ರಯಾಣ ಅನುಕೂಲಕರ ಮತ್ತು ಸುರಕ್ಷಿತ ಮಾತ್ರವಲ್ಲದೆ ಅಗ್ಗವೂ ಹೌದು. ಅದಕ್ಕಾಗಿಯೇ ಬಡ ಮತ್ತು ಮಧ್ಯಮ ವರ್ಗದ ಜನರು ಎಲ್ಲಿಗೆ ಹೋಗಬೇಕಾದರೂ ರೈಲನ್ನೇ ಆಶ್ರಯಿಸುತ್ತಾರೆ... ಹೀಗಾಗಿಯೇ ಅದು ಸಾಮಾನ್ಯ ಮನುಷ್ಯನ ಸಾರಿಗೆ ಸಾಧನವಾಗಿದೆ. ತನ್ನಲ್ಲಿ ಆಶ್ರಯ ಪಡೆದವರನ್ನು ಅವರ ಉದ್ದೇಶಿತ ಪ್ರದೇಶಕ್ಕೆ ಸೇರಿಸುವುದೇ ರೈಲಿನ ಕೆಲಸ. ಅದಕ್ಕಾಗಿಯೇ ನೂರಾರು ವರ್ಷಗಳಾದರೂ ರೈಲ್ವೇಯ ಕೀರ್ತಿ ಕುಂಠಿತವಾಗಿಲ್ಲ.
ಆದರೆ ಬಡವರ ಕೈಗೆಟುಕುವ ಈ ರೈಲ್ವೇ ಕೂಡ ಬಡವೇ ಎಂದು ಭಾವಿಸುವುದು ತಪ್ಪು. ನಮ್ಮ ಭಾರತೀಯ ರೈಲ್ವೆ ಬಹಳ ಶ್ರೀಮಂತ. 2024-25ನೇ ಸಾಲಿನಲ್ಲಿ ಬರೋಬ್ಬರಿ 2,62,200 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದರಿಂದಲೇ ರೈಲ್ವೇ ಎಷ್ಟು ಶ್ರೀಮಂತ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ನಮ್ಮ ರೈಲ್ವೇಯಲ್ಲಿ ನೂರಾರು ಕೋಟಿ ಗಳಿಸುವ ರೈಲುಗಳೂ ಇವೆ. ಹೀಗೆ ಕೆಲವು ರೈಲುಗಳ ಮೂಲಕ ಭಾರತೀಯ ರೈಲ್ವೆಗೆ ಭಾರಿ ಪ್ರಮಾಣದಲ್ಲಿ ಆದಾಯ ಬರುತ್ತಿದೆ. ಅಂತಹ ಟಾಪ್ 5 ರೈಲುಗಳ ಬಗ್ಗೆ ತಿಳಿದುಕೊಳ್ಳೋಣ.
1. ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ :
ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ದೇಶದ ರಾಜಧಾನಿ ನವದೆಹಲಿಗೆ ಸಂಚರಿಸುವ ರೈಲು. ಈ ರೈಲು 2,367 ಕಿ.ಮೀ. ದೂರ ಕ್ರಮಿಸುತ್ತದೆ. ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಈ ರೈಲಿನಲ್ಲಿ ಸದಾ ಸಾವಿರಾರು ಜನರು ಪ್ರಯಾಣಿಸುತ್ತಾರೆ... ಇದರಿಂದಾಗಿ ಇದು ತುಂಬಿ ತುಳುಕುತ್ತಿರುತ್ತದೆ. ಹೆಚ್ಚು ಜನರು ಪ್ರಯಾಣಿಸುವುದರಿಂದ ಆದಾಯವೂ ಹೆಚ್ಚು.
2022-23ನೇ ಸಾಲಿನಲ್ಲಿ 22692 ಸಂಖ್ಯೆಯ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ 5,09,510 ಜನರು ಪ್ರಯಾಣಿಸಿದ್ದಾರೆ. ಇದರಿಂದಾಗಿ 176 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ. ಕುತೂಹಲಕಾರಿ ಸಂಗತಿ ಎಂದರೆ ಈ ರೈಲು ಪ್ರಯಾಣವು ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ ಹಾದುಹೋಗುತ್ತದೆ.
2. ಸಿಯಾಲ್ದಾ ರಾಜಧಾನಿ ಎಕ್ಸ್‌ಪ್ರೆಸ್ :
12314 ಸಂಖ್ಯೆಯ ಸಿಯಾಲ್ದಾ ಎಕ್ಸ್‌ಪ್ರೆಸ್ ರೈಲು ದೇಶದ ರಾಜಧಾನಿ ನವದೆಹಲಿ ಮತ್ತು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ನಡುವೆ ಸಂಚರಿಸುತ್ತದೆ. ಇದು ಕೂಡ ದೇಶದ ಅತ್ಯಂತ ಜನನಿಬಿಡ ರೈಲುಗಳಲ್ಲಿ ಒಂದಾಗಿದೆ. 2022-23ನೇ ಸಾಲಿನಲ್ಲಿ ಈ ರೈಲಿನಲ್ಲಿ 5,09,164 ಜನರು ಪ್ರಯಾಣಿಸಿದ್ದು, 128 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದೆ.
3. ದಿಬ್ರುಗಢ ಎಕ್ಸ್‌ಪ್ರೆಸ್ :
ಅಸ್ಸಾಂನ ದಿಬ್ರುಗಢದಿಂದ ನವದೆಹಲಿಗೆ ಸಂಚರಿಸುವ ರೈಲು ಇದು. ಕಳೆದ ವರ್ಷ ಈ ರೈಲು ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಅವರ ಗಮ್ಯಸ್ಥಾನಗಳಿಗೆ ತಲುಪಿಸಿದೆ. ಇದರಿಂದಾಗಿ 126 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.
4. ಮುಂಬೈ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್ :
ಮಹಾರಾಷ್ಟ್ರದ ರಾಜಧಾನಿ ಮುಂಬೈ ಸೆಂಟ್ರಲ್‌ನಿಂದ ನವದೆಹಲಿಗೆ ಸಂಚರಿಸುವ ರೈಲು ಇದು. ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ನಡುವೆ ಸಂಚರಿಸುವ ರೈಲು ಆಗಿರುವುದರಿಂದ ಇದರಲ್ಲಿಯೂ ಗರಿಷ್ಠ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಕಳೆದ ವರ್ಷ 4,85,794 ಜನರು ಈ ರೈಲಿನಲ್ಲಿ ಪ್ರಯಾಣಿಸಿದ್ದು, 122 ಕೋಟಿ ರೂ. ಆದಾಯ ಗಳಿಸಿದೆ.
5. ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ :
ಅಸ್ಸಾಂನ ದಿಬ್ರುಗಢದಿಂದ ನವದೆಹಲಿಗೆ ಹಲವಾರು ರೈಲುಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಬಹುತೇಕವಾಗಿ ಪ್ರಯಾಣಿಕರಿಂದ ತುಂಬಿರುತ್ತವೆ. ಹಾಗಾಗಿ ಆದಾಯವೂ ಅದೇ ಮಟ್ಟದಲ್ಲಿ ಬರುತ್ತಿದೆ.
ಕಳೆದ ವರ್ಷ ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 4,20,215 ಜನರು ಪ್ರಯಾಣಿಸಿದ್ದಾರೆ. ಇದರಿಂದಾಗಿ ರೈಲ್ವೆಗೆ 116 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ.