ಆಪ್ತ ಮಿತ್ರನ ಸ್ಮರಿಸಿದ ಮೋದಿ: ಜೇಟ್ಲಿಗೆ ನಮಿಸಿದ ಬಿಜೆಪಿ ಅಧ್ಯಕ್ಷ ನಡ್ಡಾ!
ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾರತೀಯ ಇತಿಹಾಸದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ರಾಜಕಾರಣಿಗಳಲ್ಲೊಬ್ಬರು. ಪಿಎಂ ಮೋದಿಗೆ ಆತ್ಮೀಯರಾಗಿದ್ದ ಜೇಟ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರು. ಓರ್ವ ಅತ್ಯುತ್ತಮ ವಾಗ್ಮಿಯಾಗಿದ್ದ ಜೇಟ್ಲಿ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷವಾಗಿದೆ. ಹೀಗಿರುವಾಗ ಪಿಎಂ ಮೋದಿ, ಅಧ್ಯಕ್ಷ ಜೆ. ಪಿ. ನಡ್ಡಾ ಜೇಟ್ಲಿಗೆ ನಮಿಸಿದ್ದಾರೆ.
ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರ ಮೊದಲ ಪುಣ್ಯ ತಿಥಿಯಂದು ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಅವರಿಗೆ ಗೌರವ ಸಲ್ಲಿಸಿದ್ದಾರೆ.
''ಈ ದಿನ, ಕಳೆದ ವರ್ಷ ನಾವು ಅರುಣ್ ಜೇಟ್ಲಿ ಅವರನ್ನು ಕಳೆದುಕೊಂಡೆವು. ನಾನು ನನ್ನ ಸ್ನೇಹಿತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅರುಣ್ ಜಿ ಜಿ ಶ್ರದ್ಧೆಯಿಂದ ಭಾರತಕ್ಕೆ ಸೇವೆ ಸಲ್ಲಿಸಿದರು. ಅವರ ಬುದ್ಧಿ, ಬುದ್ಧಿಶಕ್ತಿ, ಕಾನೂನು ಕುಶಾಗ್ರಮತಿ ಮತ್ತು ವ್ಯಕ್ತಿತ್ವವು ಗಮನಾರ್ಹವಾದದ್ದಾಗಿತ್ತು'' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಈ ದಿನ ಪ್ರಧಾನಿ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ರಾಜ್ಯ ಪ್ರವಾಸದಲ್ಲಿದ್ದಾಗ ದೆಹಲಿಯಲ್ಲಿ ಅರುಣ್ ಜೇಟ್ಲಿ ನಿಧನರಾಗಿದ್ದರು.
ಪ್ರಧಾನಮಂತ್ರಿಯವರಲ್ಲದೆ ಕೇಂದ್ರ , ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಇತರ ಉನ್ನತ ಬಿಜೆಪಿ ನಾಯಕರು ಜೇಟ್ಲಿ ಅವರಿಗೆ ಗೌರವ ಶ್ರದ್ದಾಂಜಲಿ ಸಲ್ಲಿಸಿ, ಪಕ್ಷ ಮತ್ತು ಸರ್ಕಾರದಲ್ಲಿ ಅವರು ಮಾಡಿದ ಕೆಲಸದ ಬಗ್ಗೆ ಗುಣಗಾನ ಮಾಡಿದ್ದಾರೆ.
ಆಡಳಿತಾರೂಢ ಬಿಲೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೇಟ್ಲಿಯವರ ಪುತ್ರಿ ಸೋನಾಲಿ ಜೇಟ್ಲಿ ಸೇರಿ ಅನೇಕರು ಅರುಣ್ ಜೇಟ್ಲಿ ಸ್ಮರಣೆ ಮಾಡಿದ್ದಾರೆ.