ಎದುರಾಳಿಗೆ ನಡುಕ ತಂದ ನಿರ್ಧಾರ, ಭಾರತಕ್ಕೆ ಬರಲಿದೆ ವಿಶ್ವದ ಅತ್ಯಂತ ಘಾತಕ ಡ್ರೋನ್?
ಅಲ್‌ಖೈದಾ ನಾಯಕ ಅಯ್ಮಾನ್ ಅಲ್ ಜವಾಹರಿ ಗೊತ್ತಿರಬೇಕಲ್ಲ. ಹಿಜಾಬ್ ಗಲಾಟೆ ಸಮಯದಲ್ಲಿ ಅಲ್ಲಾಹು ಅಕ್ಭರ್ ಎಂದ ಮಂಡ್ಯದ ಬಾಲಕಿಯ ಕುರಿತಾಗಿ ಕವಿತೆ ಬರೆದಿದ್ದ ವ್ಯಕ್ತಿ. ಅಂಥಾ ವ್ಯಕ್ತಿ ಕಳೆದ ವರ್ಷದ ಜುಲೈನಲ್ಲಿ ರಾತ್ರೋರಾತ್ರಿ ಹತ್ಯೆಯಾಗಿದ್ದ. ಈತ ಹತ್ಯೆಯ ಹಿಂದೆ ಇದ್ದಿದ್ದು ಅಮೆರಿಕದ ಜೇಮ್ಸ್ ಬಾಂಡ್ ಎಂಕ್ಯು9 ಪ್ರೀಡೇಟರ್.
ವಿಶ್ವದ ಅತ್ಯಂತ ಸೈಲೆಂಟ್ ಡ್ರೋನ್ ಎಂದೇ ಹೆಸರಾಗಿರುವ ಎಂಕ್ಯು9 ಪ್ರಿಡೇಟರ್ ಖರೀದಿ ಮಾಡಲು ರಕ್ಷಣಾ ಇಲಾಖೆ ಮುಂದಾಗಿದೆ. ಇನ್ನು ಕ್ಯಾಬಿನೆಟ್ ಅನುಮೋದನೆ ಸಿಕ್ಕಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ವೇಳೆ ಇದಕ್ಕೆ ಒಪ್ಪಂದ ಮುದ್ರೆ ಬೀಳಲಿದೆ.
ಅಲ್‌ಖೈದಾ ನಾಯಕ ಅಯ್ಮಾನ್ ಅಲ್ ಜವಾಹಾರಿ ಡ್ರೋನ್ ಸ್ಟ್ರೈಕ್‌ನಲ್ಲಿ ಸತ್ತ ಎಂದು ಸುದ್ದಿ ತಿಳಿದ ತಕ್ಷಣವೇ ಅಮೆರಿಕ ಈ ದಾಳಿಗಾಗಿ ಬಳಸಿದ ಡ್ರೋನ್ ಯಾವುದು ಅನ್ನೋದರ ಹುಡುಕಾಟ ಆರಂಭವಾಗಿತ್ತು. ಈ ಡ್ರೋನ್‌ನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಅಮೆರಿಕ, ಜವಾಹರಿ ಹತ್ಯೆಯ ಮೂಲಕ ಇದರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತ್ತು.
ದಾಳಿ ಮಾಡುವವರೆಗೂ ಡ್ರೋನ್ ನಮ್ಮ ತಲೆಯ ಮೇಲೆ ಹಾರಾಡುತ್ತಿದೆ ಅನ್ನೋದೇ ಗೊತ್ತಾಗೋದಿಲ್ಲ ಅಷ್ಟು ಸೈಲೆಂಟ್ ಆಗಿ ಇರುತ್ತೆ ಪ್ರೀಡೇಟರ್. ದಾಳಿಯ ಸೂಚನೆ ಸಿಕ್ಕಾಗ ತನ್ನಲ್ಲಿನ ಮಿಸೈಲ್ ಬಳಸಿ ಅಟ್ಯಾಕ್ ಮಾಡುತ್ತದೆ. ಟಾರ್ಗೆಟ್ ಫಿಕ್ಸ್ ಮಾಡಿದರೆ, ಅಟ್ಯಾಕ್ ಮಿಸ್ ಆಗೋ ಚಾನ್ಸೇ ಇಲ್ಲ.
ಅಮೆರಿಕ ಈ ಡ್ರೋನ್‌ಅನ್ನು ಹಂಟರ್ ಕಿಲ್ಲರ್ ಯುಎವಿ ಎನ್ನುವ ಹೆಸರಿನಿಂದ ಕರೆಯುತ್ತದೆ.ದೀರ್ಘಕಾಲದವರೆಗೆ ಹಾರಾಡುವ ಸಾಮರ್ಥ್ಯವಿರುವುದು ಈ ಡ್ರೋನ್‌ನ ಹೆಚ್ಚುಗಾರಿಕೆ.ಗಾಳಿಯಿಂದ ನೆಲಕ್ಕೆ ದಾಳಿ ಮಾಡುವ ಕ್ಷಿಪಣಿಗಳನ್ನು ಹೊಂದಿರುತ್ತದೆ. ಜವಾಹರಿ ದಾಳಿಯ ವೇಳೆ ಆರ್9ಎಕ್ಸ್ ಹೆಲ್ಫೈರ್ ಕ್ಷಿಪಣಿಯನ್ನು ಬಳಸಿಕೊಂಡಿತ್ತು.
ಅಮೆರಿಕದ ಜನಲರ್ ಮೋಟಾರ್ಸ್ ಈ ಡ್ರೋನ್‌ನ ಅಭಿವೃದ್ಧಿ ಮಾಡಿದೆ. ಕಣ್ಗಾವಲು, ಗುಪ್ತಚರ, ಮಾಹಿತಿ ಕಲೆಹಾಕುವುದು ಹಾಗೂ ದಾಳಿ ಇಂಥ ಯಾವುದೇ ಕೆಲಸಗಳನ್ನು ಈ ಡ್ರೋನ್ ಮಾಡಬಲ್ಲುದು. ಮಾನವರಹಿತವಾಗಿರುವ ಕಾರಣ, ಗುಪ್ತಸ್ಥಳದಲ್ಲಿ ನಿಂತು ದಾಳಿಯನ್ನು ನಿರ್ವಹಣೆ ಮಾಡಬಹುದು.
ಸಮುದ್ರಮಟ್ಟದಿಂದ ಸಾಕಷ್ಟು ಮೇಲಿರುವ ಪ್ರದೇಶಗಳನ್ನೂ ಯಶಸ್ವಿಯಾಗಿ ದಾಳಿ ನಡೆಸುವ ಹೆಚ್ಚುಗಾರಿಕೆ ಇರುವ ಕಾರಣ ಭಾರತ ಈ ಡ್ರೋನ್ ಬಗ್ಗೆ ಆಸಕ್ತಿ ವಹಿಸಿದೆ. 1900 ಕಿಲೋಮೀಟರ್‌ವರೆಗೆ ಯಾವುದೇ ಸಮಸ್ಯೆ ಇಲ್ಲದೆ ಹಾರಾಟ ನಡೆಸಬಹುದು. 1700 ಕೆಜಿಯಷ್ಟು ತೂಕದ ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲುದು.
ಪ್ರೀಡೇಟರ್ ಡ್ರೋನ್ ನಿರ್ವಹಣೆ ಮಾಡಲು ಹೆಚ್ಚಿನ ಸಿಬ್ಬಂದಿಗಳೂ ಬೇಕಿಲ್ಲ. ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳು ಇದ್ದರೆ ಸಾಕು. ವಿಡಿಯೋ ಗೇಮ್ ಆಡಿದ ರೀತಿಯಲ್ಲಿ ನೆಲದಿಂದಲೇ ಡ್ರೋನ್‌ನ ಕಾರ್ಯಾಚರಣೆಗಳನ್ನು ವೀಕ್ಷಣೆ ಮಾಡಬಹುದು. ದಾಳಿಯ ಆದೇಶ ಸಿಕ್ಕ ನಂತರ, ಆಪರೇಟರ್‌ಗಳಿಂದಲೇ ದಾಳಿಯ ಸೂಚನೆ ಪಡೆದುಕೊಳ್ಳುತ್ತದೆ.
ಕೇವಲ 2223 ಕೆಜಿ ತೂಕವಿರುವ ಈ ಡ್ರೋನ್, 36.1 ಫೀಟ್ ಉದ್ದವಿದೆ. ರೆಕ್ಕೆಗಳನ್ನೂ ಬಳಸಿ ಹೇಳುವುದಾದರೆ 65.7 ಫೀಟ್ ಅಗಲವಿದ್ದು, 12.6 ಫೀಟ್ ಎತ್ತರ ಹೊಂದಿದೆ. 1800 ಕೆಜಿ ಇಂಧನವನ್ನು ಇದರಲ್ಲಿ ತುಂಬಿಸಬಹುದು. ಗಂಟೆಗೆ 482 ಕಿಲೋಮೀಟರ್ ಸಾಗುತ್ತದೆ. 50 ಸಾವಿರ ಫೀಟ್ ಎತ್ತರದಿಂದ ದಾಳಿ ಮಾಡಬಲ್ಲುದು. ಅಂದರೆ, ಎವರೆಸ್ಟ್‌ಗಿಂತ ಒಂದೂವರೆ ಪಟ್ಟು ಎತ್ತರಿಂದ ಡ್ರೋನ್ ಕ್ಷಿಪಣಿ ದಾಳು ನಡೆಸಬಲ್ಲುದು.
ಶಸ್ತ್ರಾಸ್ತ್ರಗಳನ್ನು ತುಂಬಿಸಲು 7 ಹಾರ್ಡ್ ಪಾಯಿಂಟ್‌ಗಳು ಪ್ರೀಡೇಟರ್ ಎಂಕ್ಯು9 ರೀಪರ್ ಡ್ರೋನ್‌ನಲ್ಲಿದೆ. ಅಮೆರಿಕ ಇದರಲ್ಲಿ 4 ಎಜಿಎಂ-114 ಹೆಲ್‌ಫೈರ್ ಮಿಸೈಲ್‌ಅನ್ನು ಅಳವಡಿಸಿ ಭದ್ರತಾ ಕಾರ್ಯಗಳಿಗೆ ನಿಯೋಜಿಸಿದೆ.