- Home
- News
- India News
- Aero India 2023 ಬೆಂಗಳೂರಿನ ಏರ್‌ಶೋಗೆ ಜನಸಾಗರ, ಬಾನಂಗಳದಲ್ಲಿ ಸ್ವದೇಶಿ ಏರ್‌ಕ್ರಾಫ್ಟ್ ಚಿತ್ತಾರ!
Aero India 2023 ಬೆಂಗಳೂರಿನ ಏರ್‌ಶೋಗೆ ಜನಸಾಗರ, ಬಾನಂಗಳದಲ್ಲಿ ಸ್ವದೇಶಿ ಏರ್‌ಕ್ರಾಫ್ಟ್ ಚಿತ್ತಾರ!
ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 14ನೇ ಆವೃತ್ತಿಯ ಏರೋ ಇಂಡಿಯಾ ಶೋಗೆ ಜನಸಾಗರವೇ ಹರಿದುಬರುತ್ತಿದೆ. ಲೋಹದ ಹಕ್ಕಿಗಳ ಚಿತ್ತಾರ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ವಿದೇಶಿ ವಿಮಾನಗಳ ನಡುವೆ ಭಾರತದ ಸ್ವದೇಶಿ ವಿಮಾನಗಳ ಆರ್ಭಟ ಜೋರಾಗಿದೆ. ಏರ್ ಶೋ ಎರಡನೇ ದಿನದ ಚಿತ್ತಾರ ಇಲ್ಲಿದೆ.

ಏರೋ ಇಂಡಿಯಾ ಶೋನಲ್ಲಿ ಸ್ವದೇಶಿ ಯುದ್ಧ ವಿಮಾನ, ಕಾಂಬಾಟ್ ಹೆಲಿಕಾಪ್ಟರ್ ಸೇರಿದಂತೆ ರಕ್ಷಣಾ ವಲಯದ ಹಲವು ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ. ಎರಡನೇ ದಿನ ಪ್ರದರ್ಶನ ಹಾಗೂ ಹಾರಾಟ ಜನಸೂರೆಗೊಂಡಿತು. ಅಮೆರಿಕ, ರಷ್ಯಾ, ಫ್ಯಾನ್ಸ್ ಸೇರಿ ಸೇರಿ 90ಕ್ಕೂ ಹೆಚ್ಚು ದೇಶಗಳು ಈ ಏರ್ ಶೋನಲ್ಲಿ ಪಾಲ್ಗೊಂಡಿದೆ. ಇದರ ನಡುವೆ ಭಾರತದ ಸ್ವದೇಶಿ ನಿರ್ಮಿತ ಫೈಟರ್ ಜೆಟ್ ಹಾಗೂ ಹೆಲಿಕಾಪ್ಟರ್ ಎಲ್ಲರ ಗಮನಸೆಳೆದಿದೆ.
ಎಚ್‌ಐಟಿ -40, ಲಘು ಯುದ್ಧ ಹೆಲಿಕಾಪ್ಟರ್, ಪ್ರಚಂಡ್, ಸೂಪರ್ ಸಾನಿಕ್ ಫೈಟರ್ ಜೆಟ್ ಸೇರಿದಂತೆ ಭಾರತದ ಏರ್‌ಕ್ರಾಫ್ಟ್ ಭಾರಿ ಸದ್ದು ಮಾಡುತ್ತಿದೆ. ಇದರ ಜೊತೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳು ಪ್ರದರ್ಶನ ಜಾಗತಿಕ ಮಟ್ಟದಲ್ಲಿ ಅತೀ ದೊಡ್ಡ ವಹಿವಾಟನ್ನು ಕುದುರಿಸಿದೆ. ಏರೋ ಇಂಡಿಯಾ ಶೋಗೆ ಆಗಮಿಸಿದ ಜನರು, ಲೋಹದ ಹಕ್ಕಿಗಳ ಚಿತ್ತಾರ ವೀಕ್ಷಿಸಿ ಆನಂದಿಸಿದರು.
ಇಂದಿನ ಏರ್ ಶೋನಲ್ಲಿ ಮತ್ತೊಂದು ವಿಶೇಷತೆ ಅಡಗಿತ್ತು, 1947ರಲ್ಲಿ ಪಾಕಿಸ್ತಾನದ ದಾಳಿಯಿಂದ ಶ್ರೀನಗರವನ್ನು ಕಾಪಾಡಿದ, 1971ರಲ್ಲಿ ಬಾಂಗ್ಲಾದೇಶಕ್ಕೆ ವಿಮೋಚನೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅತ್ಯಂತ ಹಳೆಯ ಡಕೋಟಾ ಏರ್‌ಕ್ರಾಫ್ಟ್ ಬಾನಂಗಳಲ್ಲಿ ಹೆಮ್ಮೆಯಿಂದ ಹಾರಾಡಿತು. ಯುದ್ಧದ ಬಳಿಕ ವಾಯುಸೇನೆಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ ವಿಮಾನವನ್ನು ಗುಜುರಿಗೆ ಹಾಕಲಾಗಿತ್ತು. ಈ ವಿಮಾನವನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಖರೀದಿಸಿ ಬ್ರಿಟನ್ ನೆರವು ಪಡೆದು ಮತ್ತೆ ರಿಪೇರಿ ಮಾಡಿದ್ದರು. ಬಳಿಕ ವಾಯುಸೇನೆಗೆ ಉಡುಗೊರೆಯಾಗಿ ನೀಡಿದ್ದಾರೆ.
ಏರೋ ಇಂಡಿಯಾ 2023 ರಲ್ಲಿ ಸುಮಾರು 30 ದೇಶಗಳ ಸಚಿವರು ಮತ್ತು ಜಾಗತಿಕ ಮತ್ತು ಭಾರತೀಯ ಒಇಎಂ ಗಳ 65 ಸಿಇಒ ಗಳು ಭಾಗವಹಿಸುತ್ತಿದ್ದಾರೆ. ಇತ್ತ ಪ್ರತಿ ದಿನ ಜನ ಸಾಗರವೇ ಹರಿದು ಬರುತ್ತಿದೆ. ಏರ್ ಶೋ ಕಣ್ತುಂಬಿಕೊಳ್ಳುತ್ತಿದ್ದಾರೆ. ವಿದೇಶಿ ಯುದ್ದ ವಿಮಾನಗಳ ಹಾರಾಟ ಹಾಗೂ ಪ್ರದರ್ಶನವೂ ಎಲ್ಲರ ಗಮನಸೆಳೆಯುತ್ತಿದೆ.
ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನವು ಸುಮಾರು 100 ವಿದೇಶಿ ಮತ್ತು 700 ಭಾರತೀಯ ಕಂಪನಿಗಳು ಸೇರಿದಂತೆ 800 ಕ್ಕೂ ಹೆಚ್ಚು ರಕ್ಷಣಾ ಕಂಪನಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳು ಪ್ರದರ್ಶನದಲ್ಲಿ ಭಾಗವಹಿಸುವ ಭಾರತದ ಕಂಪನಿಗಳಲ್ಲಿ ಸೇರಿವೆ
ಏರೋ ಇಂಡಿಯಾಗೆ ಶೋನಲ್ಲಿ ಕರ್ನಾಟಕದ ಸ್ಟಾಲ್ ಎಲ್ಲರ ಗಮನಸೆಳೆಯುುತ್ತಿದೆ. ಪ್ರವೇಶದ ದ್ವಾರದ ಬಳಿಕ ಮಹಿಷಾಸುರ ಸೇರಿದಂತೆ ರಾಜ್ಯದ ಸಾಂಸ್ಕೃತಿ ಪರಂಪರೆ ಸಾರುವ ದೃಶ್ಯ ವೈಭವ ಪ್ರತಿಷ್ಠಿತ ಶೋನಲ್ಲಿ ಗಮನಸೆಳೆಯುತ್ತಿದೆ
ಏರೋ ಇಂಡಿಯಾ 2023 ರಲ್ಲಿ ಏರ್‌ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್‌ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಉದ್ಯಮ, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಎಚ್‌ಸಿ ರೊಬೊಟಿಕ್ಸ್, ಎಸ್‌ಎಬಿ, ಸಫ್ರಾನ್, ರೋಲ್ಸ್ ರಾಯ್ಸ್ ಸೇರಿದಂತೆ ಪ್ರಮುಖ ಕಂಪನಿಗಳು ಭಾಗವಹಿಸಿದೆ.
ಫೆಬ್ರವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಏರೋ ಇಂಡಿಯಾ ಉದ್ಘಾಟನೆ ಮಾಡಿದ್ದರೆ. ಕಳೆದ 14 ಆವೃತ್ತಿಗಳು ಬೆಂಗಳೂರಿನಲ್ಲೇ ನಡೆದಿದೆ. ಏಷ್ಯಾದ ಅತೀ ದೊಡ್ಡ ಏರ್ ಶೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ಈ ಬಾರಿ ಗರಿಷ್ಠ ಮಟ್ಟದ ವ್ಯವಹಾರ ಕುದುರುವ ನಿರೀಕ್ಷೆಗಳು ಬಲಗೊಳ್ಳುತ್ತಿದೆ.
ಏರ್ ಶೋ ಉದ್ಘಾಟಿಸಿ ಮಾತನಾಡಿದ ಮೋದಿ, ಬೆಂಗಳೂರಿನ ಆಗಸವು ನವಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ. ಈ ಹೊಸ ಎತ್ತರವು ನವ ಭಾರತದ ವಾಸ್ತವವಾಗಿದೆ, ಇಂದು ಭಾರತವು ಹೊಸ ಎತ್ತರಗಳನ್ನು ಮುಟ್ಟುತ್ತಿದೆ ಮತ್ತು ಅವುಗಳನ್ನೂ ಮೀರುತ್ತಿದೆ ಎಂದರು.
ಫೆಬ್ರವರಿ 17ರ ವರೆಗೆ ಏರೋ ಇಂಡಿಯಾ ಶೋ ನಡೆಯಲಿದೆ. ಮೈನವಿರೇಳಿಸುವ ರೋಚಕ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ. ಬೆಂಗಳೂರಿನಲ್ಲಿ ಇದೀಗ ಲೋಹದ ಹಕ್ಕಿಗಳ ಚಿತ್ತಾರ, ಸದ್ದುಗಳೇ ಕೇಳಿಸುತ್ತಿದೆ.