ಸೀಬೆ ಹಣ್ಣು ಸೇವನೆಯಿಂದ ಈ ಅಡ್ಡಪರಿಣಾಮ ಗ್ಯಾರಂಟಿ!
ರಾಜ್ಯದ ಎಲ್ಲೆಡೆ ಹೇರಳವಾಗಿ ಸಿಗುವಂತಹ ಸೀಬೆ (ಪೇರಲ) ಹಣ್ಣಿನ ಸೇವನೆಯಿಂದ ದೇಹಕ್ಕೆ ಅತಿಹೆಚ್ಚು ಪೋಷಕಾಂಶ ಸಿಗುತ್ತದೆ. ಹೀಗಾಗಿ, 10 ಸೇಬು ಹಣ್ಣಿಗೆ 1 ಲೋಕಲ್ ಸೀಬೆ ಹಣ್ಣು ಸಮ ಎಂದು ಹೇಳುತ್ತಾರೆ. ಆದರೆ, ಈ ಪೇರಲ ಹಣ್ಣು ತಿನ್ನುವುದರಿಂದ ದೇಹಕ್ಕೆ ಲಾಭವಾಗುವ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಯೂ ಬರಬಹುದು. ಹಾಗಾದರೆ, ಯಾರೆಲ್ಲಾ ಪೇರಲ ಹಣ್ಣು ಸೇವಿಸಬಾರದು ಇಲ್ಲಿದೆ ನೋಡಿ..
ಜಾಮಕಾಯಿ
ಚಳಿಗಾಲ ಆರಂಭವಾಗುವ ಮುನ್ನ ಅತಿಹೆಚ್ಚಾಗಿ ಸಿಗುವ ಸೀಬೆ ಹಣ್ಣು ಅತ್ಯಂತ ಪೌಷ್ಠಿಕಾಂಶಯುಕ್ತ ಹಣ್ಣಾಗಿದೆ. ಇದನ್ನು ಪೇರಲ ಹಣ್ಣು, ಪ್ಯಾರ್ಲ ಹಣ್ಣು, ಸೀಬೆ ಹಣ್ಣು, ಜಾಮು ಕಾಯಿ ಎಂದೆಲ್ಲಾ ಕರೆಯುತ್ತಾರೆ. 10 ಸೇಬು ಹಣ್ಣಿನಲ್ಲಿರುವಷ್ಟು ಪೋಷಕಾಂಶ ಒಂದು ಸೀಬೆ ಹಣ್ಣಿನಿಂದ ಲಭ್ಯವಾಗುತ್ತದೆ. ಆದರೆ, ಈ ಹಣ್ಣಿನ ಬಗ್ಗೆ ತಿಳಿದುಕೊಳ್ಳದೇ ತಿಂದರೆ ಆರೋಗ್ಯ ಸಮಸ್ಯೆ ಬರಬಹುದು. ಏನೇನು ಲಾಭ ನಷ್ಟ ಅಂತ ನೋಡೋಣ.
ಈ ಪೇರಲ ಹಣ್ಣು ಸೇವನೆಯಿಂದ ದೇಹಕ್ಕೆ ಅಗತ್ಯವಾಗಿರುವ ಹಾಗೂ ಜೀರ್ಣ ಕ್ರಿಯೆಗೆ ಬೇಕಿರುವ ಫೈಬರ್ ಅಂಶ ಜಾಸ್ತಿ ಸಿಗುತ್ತದೆ. ಇದರಿಂದಾಗಿ ಮಲಬದ್ಧತೆ ಸಮಸ್ಯೆ ಇರಲ್ಲ. ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ದೇಹದಲ್ಲಿನ ಉರಿಯನ್ನು ಕಡಿಮೆ ಮಾಡುತ್ತವೆ. ಹೀಗಾಗಿ, ಉಷ್ಣಾಂಶ ಹೆಚ್ಚಿರುವವರು ಈ ಹಣ್ಣನ್ನು ತಿನ್ನಬಹುದು.
ಇದೇ ಸೀಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವೂ ಸಾಕಷ್ಟಿದೆ. ಇದು ನಮ್ಮ ದೇಹಕ್ಕೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಫೈಬರ್ ಮತ್ತು ಪೊಟ್ಯಾಶಿಯಂ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನೂ ಸ್ವಲ್ಪ ಮಟ್ಟಿಗೆ ತಗ್ಗಿಸುತ್ತದೆ. ಮುಖ್ಯವಾಗಿ ಕಣ್ಣಿನ ದೃಷ್ಟಿ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಈ ಸೀಬೆ ಹಣ್ಣಿನ ಸೇವನೆ ಸಹಾಯಕವಾಗಲಿದೆ.
ಯಾರು ಈ ಸೀಬೆ ಹಣ್ಣು ಸೇವಿಸಬಾರದು?
ಪೇರಲ ಹಣ್ಣಿನಲ್ಲಿ ಫೈಬರ್ ಜಾಸ್ತಿ ಇರುವುದರಿಂದ ಇದನ್ನು ಜಾಸ್ತಿ ತಿಂದರೆ ಹೊಟ್ಟೆಯಲ್ಲಿ ಅಜೀರ್ಣತೆ ಉಂಟಾಗಿ ಗ್ಯಾಸ್ ಟ್ರಬಲ್ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬರ ಆಗಬಹುದು. ಇನ್ನು ಪೇರಲ ಹಣ್ಣಿನಲ್ಲಿ ಗಟ್ಟಿಯಾದ ಬೀಜಗಳು ಇರುವುದರಿಂದ ಕಿಡ್ನಿ ಸ್ಟೋನ್ ಇರುವವರು ಇದನ್ನು ಜಾಸ್ತಿ ತಿನ್ನಬಾರದು.
ಇನ್ನು ಶೀತ ಹೆಚ್ಚಾಗಿ ಇರುವವರು ಕೂಡ ಅಥವಾ ದೇಹಕ್ಕೆ ತಂಪಾಗುವ ಆಹಾರ ಸೇವಿಸಿದರೆ ಶೀತ ಬರುತ್ತದೆ ಎನ್ನುವವರು ಕೂಡ ಈ ಪೇರಲ ಹಣ್ಣು ಜಾಸ್ತಿ ಸೇವನೆ ಮಾಡದೇ ಮಿತವಾಗಿ ಒಂದೆರಡು ಹಣ್ಣು ತಿನ್ನುವುದಕ್ಕೆ ಸಮಸ್ಯೆ ಇಲ್ಲ. ಯಾವುದೇ ಹಣ್ಣನ್ನು ಇತ-ಮಿತವಾಗಿ ಸೇವನೆ ಮಾಡಿದರೆ ಸಮಸ್ಯೆಗಳು ಬರುವುದಿಲ್ಲ. ಆದರೆ, ಬಿಟ್ಟಿಯಾಗಿ ಸಿಕ್ಕಿದ್ದೇ ಚಾನ್ಸ್ ಎಂದು ಮರದ ಬಳಿಯೇ ಕುಳಿತು ಬೇಕಾಬಿಟ್ಟಿಯಾಗಿ ತಿಂದರೆ ಹೊಟ್ಟೆಯ ಜೀರ್ಣ ಶಕ್ತಿ ಹಾಳಾಗುತ್ತದೆ.
ಈ ಪೇರಲ ಹಣ್ಣನ್ನು ಉಪ್ಪು, ಸ್ವಲ್ಪ ಖಾರದ ಪುಡಿ ಮಿಶ್ರಣ ಮಾಡಿ ಅದಕ್ಕೆ ಲೇಪನ ಮಾಡಿಕೊಂಡು ತಿಂದರೆ ತುಂಬಾ ರುಚಿಯಾಗಿರುತ್ತದೆ.
ಹೆಚ್ಚಾಗಿ ಪೇರಲ ಹಣ್ಣು ತಿನ್ನಲು ಬೇಸರವಾಗುತ್ತದೆ ಎನ್ನುವವರು, ಇತರೆ ಹಣ್ಣುಗಳು ಹಾಗೂ ತರಕಾರಿಗಳ ಜೊತೆಗೆ ಸಲಾಡ್ ರೀತಿಯಲ್ಲಿ ಮಿಕ್ಸ್ ಸಲಾಡ್ ಮಾಡಿಕೊಂಡು ಸೇವನೆ ಮಾಡಬಹುದು.
ನಮ್ಮ ಬಾಯಲ್ಲಿ ಪೇರಲ ಹಣ್ಣು ಅಥವಾ ಕಾಯಿಯನ್ನು ಕಚ್ಚಿ ತಿನ್ನಲು ಆಗುವುದಿಲ್ಲ ಎನ್ನುವವರು ಜ್ಯೂಸ್ ಮಾಡಿಕೊಂಡು ಕೂಡ ಕುಡಿಯಬಹುದು.