RCB Franchise Sale: ಆರ್‌ಸಿಬಿ ಫ್ರಾಂಚೈಸಿ ಮಾರಾಟ ಅಧಿಕೃತ; ಇಲ್ಲಿದೆ ತೆರೆಮರೆಯ ಅಚ್ಚರಿಯ ಕಾರಣ!
Royal Challengers Bengaluru ಫ್ರಾಂಚೈಸಿಯನ್ನು ಅದರ ಮಾಲೀಕರಾದ ಡಿಯಾಜಿಯೋ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ವಿರಾಟ್ ಕೊಹ್ಲಿ ನಿವೃತ್ತಿ ಬಳಿಕ ತಂಡದ ಬ್ರ್ಯಾಂಡ್ ಮೌಲ್ಯ ಕುಸಿಯುವ ಭೀತಿ ಹಾಗೂ ಇತರ ಕಾರಣಗಳಿಂದ 2026ರೊಳಗೆ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸಲು ಕಂಪನಿ ನಿರ್ಧರಿಸಿದೆ.

ಐಪಿಎಲ್
ಐಪಿಎಲ್ ಹಾಗೂ ಡಬ್ಲ್ಯುಪಿಎಲ್‌ನ ಆರ್‌ಸಿಬಿ ಫ್ರಾಂಚೈಸಿ ಮಾರಾಟಕ್ಕಿರುವುದು ಈಗ ಅಧಿಕೃತಗೊಂಡಿದೆ ಎಂದು ಪ್ರತಿಷ್ಠಿತ ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಪ್ರಕಟಿಸಿದೆ.
ಫ್ರಾಂಚೈಸಿಯ ಮಾಲೀಕರಾದ ಡಿಯಾಜಿಯೋ
ಬುಧವಾರ (ನ.5), ಆರ್‌ಸಿಬಿ ಫ್ರಾಂಚೈಸಿಯ ಮಾಲೀಕರಾದ ಡಿಯಾಜಿಯೋ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಗೆ ಈ ಬಗ್ಗೆ ಮಾಹಿತಿ ರವಾನಿಸಿದೆ ಎಂದು ತಿಳಿದುಬಂದಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ, 2026ರ ಮಾ.31ರೊಳಗೆ ಮಾರಾಟ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದು ಡಿಯಾಜಿಯೋ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಗೊತ್ತಾಗಿದೆ.
ಕ್ರಿಕೆಟ್ ತಂಡಗಳ ನಿರ್ವಹಣೆ
ತಮ್ಮ ಮೂಲ ಉದ್ಯಮ ಮದ್ಯ ಮಾರಾಟವಾಗಿದ್ದು, ಕ್ರಿಕೆಟ್ ತಂಡಗಳ ನಿರ್ವಹಣೆ ತಮ್ಮ ಆಸಕ್ತಿಯ ವ್ಯಾಪ್ತಿಯಿಂದ ಹೊರಗಿದೆ ಎಂದು ಡಿಯಾಜಿಯೋ ತಿಳಿಸಿದ್ದರೂ, ಕಳೆದ ವರ್ಷ ಪುರುಷರ ತಂಡ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವೇ ತಂಡದ ಮಾರಾಟಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಅತಿದೊಡ್ಡ ಬ್ರ್ಯಾಂಡ್ ವಿರಾಟ್ ಕೊಹ್ಲಿ
ಜೊತೆಗೆ ತಂಡದ ಅತಿದೊಡ್ಡ ಬ್ರ್ಯಾಂಡ್ ವಿರಾಟ್ ಕೊಹ್ಲಿ ಇನ್ನೇನು ನಿವೃತ್ತಿ ಅಂಚಿನಲ್ಲಿದ್ದು, ಅವರಿಲ್ಲದ ಆರ್‌ಸಿಬಿ ತಂಡವನ್ನು ಊಹಿಸಿಕೊಳ್ಳಲು ಅಸಾಧ್ಯ ಎನ್ನುವುದು ಫ್ರಾಂಚೈಸಿಗೆ ಚೆನ್ನಾಗಿ ತಿಳಿದಿದೆ. ಕೊಹ್ಲಿ, ಎಬಿಡಿ, ಗೇಲ್ ಸೇರಿ ಕಟ್ಟಿದ ಬ್ರ್ಯಾಂಡ್ ಮುಂದುವರಿಸುವುದು ಸುಲಭವಲ್ಲ.
ಕೊಹ್ಲಿ ನಿವೃತ್ತಿಯ ಬಳಿಕ ತಂಡದ ಬ್ರ್ಯಾಂಡ್ ಮೌಲ್ಯ ಕುಸಿಯಬಹುದು ಎಂದು ಅಂದಾಜಿಸಿರುವ ಫ್ರಾಂಚೈಸಿಯು, ಅದಕ್ಕೆ ಮೊದಲೇ ತಂಡವನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಆರ್‌ಸಿಬಿ ಫ್ರಾಂಚೈಸಿ
ಇತ್ತೀಚೆಗೆ ಆರ್‌ಸಿಬಿ ಫ್ರಾಂಚೈಸಿಯನ್ನು ಬರೋಬ್ಬರಿ 2 ಬಿಲಿಯನ್ ಡಾಲರ್ (ಅಂದಾಜು 17000 ಕೋಟಿ ರು.ಗೆ) ಡಿಯಾಜಿಯೋ ಮಾರಾಟ ಮಾಡಲು ಮಾತಕತೆ ನಡೆಸುತ್ತಿದೆ ಎನ್ನುವ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು.
ಇದನ್ನೂ ಓದಿ: ಸ್ಮೃತಿ ಮಂಧನಾ, ಜೆಮಿಮಾಗೆ ಬಂಪರ್ ನಗದು ಬಹುಮಾನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ!