IPL 2021 ಸ್ಟೋಕ್ಸ್, ಬಟ್ಲರ್ ಬದಲಿಗೆ ರಾಯಲ್ಸ್ ತಂಡ ಕೂಡಿಕೊಂಡ ವಿಂಡೀಸ್ ಟಿ20 ಸ್ಪೆಷಲಿಸ್ಟ್‌ಗಳು..!
ನವದೆಹಲಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ಭಾಗ-2ಕ್ಕೆ ಈಗಿನಿಂದಲೇ ಎಲ್ಲಾ ಫ್ರಾಂಚೈಸಿಗಳು ಸಕಲ ಸಿದ್ದತೆ ನಡೆಸುತ್ತಿವೆ. ಕೆಲವು ಆಟಗಾರರು ವೈಯುಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದರೆ ಮತ್ತೆ ಕೆಲವು ಆಟಗಾರರು ಐಪಿಎಲ್ ತಂಡ ಕೂಡಿಕೊಳ್ಳುತ್ತಿದ್ದಾರೆ. ಇದೀಗ ರಾಜಸ್ಥಾನ ರಾಯಲ್ಸ್ ತಂಡಕ್ಕೆ ವೆಸ್ಟ್ ಇಂಡೀಸ್‌ನ ಇಬ್ಬರು ಟಿ20 ಸ್ಪೆಷಲಿಸ್ಟ್ ಆಟಗಾರರು ಸೇರ್ಪಡೆಯಾಗಿದ್ದಾರೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
14ನೇ ಆವೃತ್ತಿಯ ಐಪಿಎಲ್ ಭಾಗ 2 ಟೂರ್ನಿಯು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಐಪಿಎಲ್ ಭಾಗ 2 ಆರಂಭಕ್ಕೂ ಮುನ್ನವೇ ವೈಯುಕ್ತಿಕ ಕಾರಣ ನೀಡಿ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗರಾದ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ರಾಜಸ್ಥಾನ ರಾಯಲ್ಸ್ ತಂಡದಿಂದ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದರು.
ಬೆನ್ ಸ್ಟೋಕ್ಸ್ ವೈಯುಕ್ತಿಕ ಕಾರಣದಿಂದ ಅನಿರ್ದಿಷ್ಟಾವಧಿಗೆ ವಿಶ್ರಾಂತಿಯನ್ನು ಪಡೆದಿದ್ದು, ಇಂಗ್ಲೆಂಡ್‌ನ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ಹೊರಗುಳಿದಿದ್ದಾರೆ. ಮತ್ತೊಂದೆಡೆ ಜೋಸ್ ಬಟ್ಲರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಯುಎಇ ಚರಣದ ಐಪಿಎಲ್‌ನಿಂದ ಹೊರಗುಳಿಯುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಈ ಇಬ್ಬರು ಆಟಗಾರರ ಬದಲಿಗೆ ರಾಜಸ್ಥಾನ ರಾಯಲ್ಸ್ ತಂಡವು ವೆಸ್ಟ್ ಇಂಡೀಸ್‌ನ ಟಿ20 ಸ್ಪೆಷಲಿಸ್ಟ್ ಕ್ರಿಕೆಟಿಗರಾದ ಎವಿನ್ ಲೆವಿಸ್ ಹಾಗೂ ಒಶಾನೆ ಥಾಮಸ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸ್ಪೋಟಕ ಎಡಗೈ ಬ್ಯಾಟ್ಸ್‌ಮನ್ ಎವಿನ್ ಲೆವಿಸ್ ವಿಂಡೀಸ್ ಪರ 45 ಟಿ20 ಪಂದ್ಯಗಳನ್ನಾಡಿ 1,318 ರನ್ ಸಿಡಿಸಿದ್ದಾರೆ, ಭಾರತ ವಿರುದ್ದವೇ ಚುಟುಕು ಕ್ರಿಕೆಟ್‌ನಲ್ಲಿ ಲೆವಿಸ್ ಎರಡು ಶತಕ ಚಚ್ಚಿದ್ದಾರೆ. ಈ ಹಿಂದೆ ಎವಿನ್ ಲೆವಿಸ್ ಅವರನ್ನು 3.8 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. 16 ಐಪಿಎಲ್ ಪಂದ್ಯಗಳಲ್ಲಿ ಲೆವಿಸ್ 450 ರನ್ ಸಿಡಿಸಿದ್ದಾರೆ.
ಇನ್ನು ವಿಂಡೀಸ್‌ನ ಮಾರಕ ವೇಗಿ ಒಶಾನೆ ಥಾಮಸ್ ಕೆರಿಬಿಯನ್ ಪರ 17 ಟಿ20 ಪಂದ್ಯಗಳನ್ನಾಡಿ 19 ವಿಕೆಟ್ ಕಬಳಿಸಿದ್ದಾರೆ. ಥಾಮಸ್ ಐಪಿಎಲ್‌ನಲ್ಲಿ ಕೇವಲ 4 ಪಂದ್ಯಗಳನ್ನಷ್ಟೇ ಆಡಿದ್ದಾರೆ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಈ ಇಬ್ಬರು ಆಟಗಾರರ ಸೇರ್ಪಡೆ ರಾಯಲ್ಸ್ ಪಡೆಯನ್ನು ಪ್ಲೇ ಆಫ್‌ಗೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.