ಎಡ ಭಾಗದಿಂದಲೇ ಆಕಾಶ ನೋಡಿ ಮೈದಾನಕ್ಕಿಳಿಯೋದ್ಯಾಕೆ? ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕೊಟ್ಟ ಧೋನಿ!
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ದಂತಕಥೆ. ಭಾರತ ತಂಡವನ್ನು ಮೂರು ಮಾದರಿಗಳಲ್ಲೂ ನಂಬರ್ ಒನ್ ಸ್ಥಾನದಲ್ಲಿ ನಿಲ್ಲಿಸಿದ ಸ್ಟಾರ್ ನಾಯಕ. ಪ್ರಸ್ತುತ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಪರ ಆಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೆಚ್ಚು ಪರಿಚಯ ಅಗತ್ಯವಿಲ್ಲದ ಹೆಸರು ಮಹೇಂದ್ರ ಸಿಂಗ್ ಧೋನಿ. ಭಾರತೀಯ ಕ್ರಿಕೆಟ್ ಸಂಚಲನ. ವಿಶ್ವ ಕ್ರಿಕೆಟ್‌ನಲ್ಲಿ ಮಿಸ್ಟರ್ ಕೂಲ್ ನಾಯಕ. ಭಾರತ ತಂಡಕ್ಕೆ ಮೂರು ಮಾದರಿಗಳಲ್ಲಿ ಐಸಿಸಿ ಟ್ರೋಫಿಗಳನ್ನು ತಂದುಕೊಟ್ಟ ದಂತಕಥೆ ನಾಯಕ.
ಮಹೇಂದ್ರ ಸಿಂಗ್ ಧೋನಿ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಸಹಾ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ.
ವಿಕೆಟ್ ಹಿಂದೆ ನಿಂತು ಕೇವಲ ಕ್ಷೇತ್ರರಕ್ಷಣೆ ಮಾತ್ರವಲ್ಲದೇ, ತಮ್ಮ ಚಾಣಾಕ್ಷ ನಿರ್ಧಾರಗಳ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ತಂತ್ರಗಾರ ಧೋನಿ ನಾಯಕತ್ವಕ್ಕೆ ಮನಸೋಲದವರೇ ಇಲ್ಲ ಎನ್ನುವುದು ಜಗಜ್ಜಾಹೀರಾದ ವಿಚಾರ.
ಧೋನಿ ಬಹುತೇಕ ಸ್ಪರ್ಧಾತ್ಮಕ ಕ್ರಿಕೆಟ್‌ನ ಸಂಧ್ಯಾಕಾಲದಲ್ಲಿ ನಿಂತಿದ್ದಾರೆ. 2025ರ ಐಪಿಎಲ್ ಟೂರ್ನಿಯು ಧೋನಿ ಆಡಲಿರುವ ಕಟ್ಟ ಕಡೆಯ ಐಪಿಎಲ್ ಟೂರ್ನಿ ಆಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ 5 ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದು ಕೇವಲ ಆಟಗಾರನಾಗಿ ಕಾಣಿಸಿಕೊಂಡಿದ್ದರು.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಐಪಿಎಲ್ ಪಂದ್ಯದವರೆಗೆ ಸಾಮಾನ್ಯವಾಗಿ ಧೋನಿ ಬ್ಯಾಟಿಂಗ್‌ಗೆ ಬಂದರೆ ಮೈದಾನಕ್ಕೆ ಬರುತ್ತಿದ್ದಂತೆ ಬೌಂಡರಿಯಲ್ಲಿ ನಿಂತು ಆಕಾಶದ ಕಡೆ ತಿರುಗಿ ನೋಡುತ್ತಾರೆ. ಧೋನಿ ಯಾಕೆ ಹೀಗೆ ನೋಡ್ತಾರೆ ಅಂತ ಅನೇಕರಿಗೆ ಪ್ರಶ್ನೆಗಳು ಬಂದಿರುತ್ತವೆ. ಇದಕ್ಕೆ ಕಾರಣವೇನೆಂದು ಅನೇಕರು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಕುರಿತಂತೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಧೋನಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು.. ಅವರ ಉತ್ತರದ ವೀಡಿಯೊಗಳು ವೈರಲ್ ಆಗಿವೆ. ಅದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಐಪಿಎಲ್ ವರೆಗೆ ನೀವು ಬ್ಯಾಟಿಂಗ್‌ಗೆ ಬಂದಾಗ ಬೌಂಡರಿ ಲೈನ್ ಮೇಲೆ ನಿಂತು ಆಕಾಶದ ಕಡೆ ನೋಡುವುದು ಯಾಕೆ ಎಂದು ಪ್ರಶ್ನೆ ಮಾಡಲಾಯಿತು.
“ನಾನು ಬ್ಯಾಟಿಂಗ್ ಮಾಡಲಿಳಿಯುವಾಗ ಕೆಲವೊಮ್ಮೆ ಸೂರ್ಯ ಎಡಭಾಗದಲ್ಲಿರುತ್ತಾನೆ. ಅದು ಒಂದು ಕಾರಣ ಇರಬಹುದು. ಹಗಲು ರಾತ್ರಿ ಪಂದ್ಯಗಳ ಸಮಯದಲ್ಲಿ ಕೆಲವೊಮ್ಮೆ ಮೇಲೆ ನೋಡುವುದು ಅಭ್ಯಾಸವಾಯಿತು. ನನಗೆ ಬಲಭಾಗದಲ್ಲಿ ಸೂರ್ಯನನ್ನು ನೋಡುವ ಅಭ್ಯಾಸವಿಲ್ಲ. ನಾನು ಎಲ್ಲಿಗೆ ಹೋದರೂ ನನ್ನ ನೋಟ ಎಡಭಾಗದಲ್ಲಿರುತ್ತದೆ” ಎಂದು ಧೋನಿ ಹೇಳಿದ್ದಾರೆ