ಆಯ್ಕೆದಾರರಿಗೆ ಛೀಮಾರಿ ಹಾಕಿದ ವಾಷಿಂಗ್ಟನ್ ಸುಂದರ್ ತಂದೆ..!
ಟೀಂ ಇಂಡಿಯಾ ಪ್ರತಿಭಾನ್ವಿತ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದರ ಬೆನ್ನಲ್ಲೇ ಸುಂದರ್ ತಂದೆ, ಆಯ್ಕೆ ಸಮಿತಿ ಮೇಲೆ ತಿರುಗಿ ಬಿದ್ದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಸೂಪರ್ ಸೆಂಚುರಿ (101 ರನ್ ಅಜೇಯ) ಬಾರಿಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿ ಡ್ರಾ ಮಾಡಿಸಿದವರು ವಾಷಿಂಗ್ಟನ್ ಸುಂದರ್. ಇದರ ಬೆನ್ನಲ್ಲೇ ಅವರ ತಂದೆ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಛೀಮಾರಿ ಹಾಕಿದ್ದಾರೆ.
ವಾಷಿಂಗ್ಟನ್ ಸುಂದರ್ ತಂದೆ ಎಂ ಸುಂದರ್ ಈ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದು, ತಮ್ಮ ಮಗನಿಗೆ ತಂಡದಲ್ಲಿ ಸ್ಥಿರವಾದ ಅವಕಾಶ ಸಿಗದಿದ್ದರ ಬಗ್ಗೆ ಬೇಸರ ಹೊರಹಾಕಿದ್ದಾರೆ.
“ವಾಷಿಂಗ್ಟನ್ ಸತತವಾಗಿ ಚೆನ್ನಾಗಿ ಆಡ್ತಿದ್ದಾರೆ. ಆದ್ರೆ ಅವರ ಆಟನ ಯಾರೂ ಗಮನಿಸ್ತಿಲ್ಲ, ಮಾತಾಡ್ತಿಲ್ಲ. ಬೇರೆ ಆಟಗಾರರಿಗೆ ಅವಕಾಶ ಸಿಗುತ್ತೆ. ಆದ್ರೆ ನನ್ನ ಮಗನಿಗೆ ಅಷ್ಟಾಗಿ ಸಿಗ್ತಿಲ್ಲ. 4ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಮಾಡಿದ ಹಾಗೆ, ವಾಷಿಂಗ್ಟನ್ 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡ್ಬೇಕು ಎಂದು ಎಂ ಸುಂದರ್ ಹೇಳಿದ್ದಾರೆ.
ಇನ್ನು ಸತತ 5 ರಿಂದ 10 ಪಂದ್ಯಗಳಲ್ಲಿ ಅವರಿಗೆ ಅವಕಾಶ ಕೊಡ್ಬೇಕು. ಮೊದಲ ಟೆಸ್ಟ್‌ನಲ್ಲಿ ಅವ್ರನ್ನ ಆಡಿಸದೇ ಇರೋದು ಆಶ್ಚರ್ಯ ತಂದಿದೆ. ಆಯ್ಕೆದಾರರು ಅವರ ಆಟನ ಗಮನಿಸ್ಬೇಕು” ಅಂತ ವಾಷಿಂಗ್ಟನ್ ಸುಂದರ್ ತಂದೆ ಹೇಳಿದ್ದಾರೆ.
2021ರಲ್ಲಿ ವಾಷಿಂಗ್ಟನ್ ಸುಂದರ್ ಟೆಸ್ಟ್ ತಂಡದಿಂದ ಹೊರಬಿದ್ದ ಬಗ್ಗೆ ಮಾತಾಡಿದ ಎಂ. ಸುಂದರ್, “2021ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 85 ರನ್, ಅಹಮದಾಬಾದ್‌ನಲ್ಲಿ 96 ರನ್ ಮಾಡಿದ್ರು. ಅದೂ ಬ್ಯಾಟಿಂಗ್‌ಗೆ ಸಹಕಾರಿಯಲ್ಲದ ಪಿಚ್‌ಗಳಲ್ಲಿ. ಒಂದು ಅಥವಾ ಎರಡು ಪಂದ್ಯಗಳಲ್ಲಿ ಸೋತರೆ ನನ್ನ ಮಗನನ್ನ ತಂಡದಿಂದ ಕೈಬಿಡ್ತಾರೆ. ಇದು ನ್ಯಾಯವಲ್ಲ” ಅಂತ ಎಂ. ಸುಂದರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಪಿಎಲ್‌ನಲ್ಲೂ ಅವಕಾಶವಿಲ್ಲ
ಇನ್ನು ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ಕೂಡ ವಾಷಿಂಗ್ಟನ್‌ಗೆ ಅವಕಾಶ ಕೊಡದ ಬಗ್ಗೆ ಮಾತಾಡಿದ ಎಂ.ಸುಂದರ್, ''ಗುಜರಾತ್ ಟೈಟಾನ್ಸ್ ಅವರಿಗೆ ಸತತವಾಗಿ ಅವಕಾಶ ಕೊಡ್ತಿಲ್ಲ. ಐಪಿಎಲ್ 2023 ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 24 ಎಸೆತಗಳಲ್ಲಿ 48 ರನ್ ಬಾರಿಸಿ ತಮ್ಮ ಸಾಮರ್ಥ್ಯ ತೋರಿಸಿದ್ರು. ಯಶಸ್ವಿ ಜೈಸ್ವಾಲ್‌ಗೆ ರಾಜಸ್ಥಾನ ರಾಯಲ್ಸ್ ಹೇಗೆ ಬೆಂಬಲ ಕೊಟ್ಟರು ಅಂತ ನೋಡಿ” ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಸಮಯೋಚಿತ ಶತಕ ಸಿಡಿಸಿದ ಸುಂದರ್‌ಗೆ ಭಾರತ ತಂಡದಲ್ಲಿ ಮತ್ತಷ್ಟು ಅವಕಾಶ ಸಿಗಲಿ ಎನ್ನುವುದು ಅವರ ತಂದೆಯ ಬಯಕೆಯಾಗಿದೆ.