- Home
- Sports
- Cricket
- ಸೌರವ್ ಗಂಗೂಲಿ ಅನ್‌ಫಾಲೋ ಮಾಡಿದ ವಿರಾಟ್ ಕೊಹ್ಲಿ..! ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ಕೊಹ್ಲಿ ಜಿದ್ದು!
ಸೌರವ್ ಗಂಗೂಲಿ ಅನ್‌ಫಾಲೋ ಮಾಡಿದ ವಿರಾಟ್ ಕೊಹ್ಲಿ..! ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ ಕೊಹ್ಲಿ ಜಿದ್ದು!
ಬೆಂಗಳೂರು(ಏ.17): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ವಿರಾಟ್ ಕೊಹ್ಲಿ, ದಾದಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಈ ಕುರಿತಾದ ಒಂದು ರೀಪೋರ್ಟ್ ಇಲ್ಲಿದೆ ನೋಡಿ.

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ದಾಖಲಿಸಿತ್ತು.ಇನ್ನು ಇದೇ ಪಂದ್ಯವು ಸೌರವ್ ಗಂಗೂಲಿ ಹಾಗೂ ವಿರಾಟ್ ಕೊಹ್ಲಿ ಮುಖಾಮುಖಿಗೂ ಸಾಕ್ಷಿಯಾಗಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸೌರವ್ ಗಂಗೂಲಿ ಪಂದ್ಯ ಮುಕ್ತಾಯದ ಬಳಿಕ ಡಗೌಟ್‌ನಲ್ಲಿಯೇ ಕುಳಿತಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಗಂಗೂಲಿಯತ್ತ ಗುರಾಯಿಸಿ ನೋಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಆರ್‌ಸಿಬಿ-ಡೆಲ್ಲಿ ಪಂದ್ಯ ಮುಗಿದ ಬಳಿಕ ಎರಡೂ ತಂಡಗಳು ಪರಸ್ಪರ ಅಭಿನಂದಿಸುವ ವೇಳೆ ಗಂಗೂಲಿ, ಕೊಹ್ಲಿಯತ್ತ ನೋಡದೆಯೇ ಮುನ್ನಡೆದರು. ಈ ಘಟನೆಗಳ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು.
ಇನ್ನು ಇಷ್ಟಕ್ಕೆ ಸುಮ್ಮನಾಗದ ವಿರಾಟ್ ಕೊಹ್ಲಿ, ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಅನ್‌ಫಾಲೋ ಮಾಡುವ ಮೂಲಕ ತಮ್ಮ ಜಿದ್ದು ಮುಂದುವರೆಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿಯೂ ಸೇರಿದಂತೆ 276 ಜನರನ್ನು ಫಾಲೋ ಮಾಡುತ್ತಿದ್ದರು. ಆದರೆ ಇದೀಗ ಬಿಸಿಸಿಐ ಮಾಜಿ ಅಧ್ಯಕ್ಷರನ್ನು ಕೊಹ್ಲಿ ಅನ್‌ಫಾಲೋ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವೆ ಮನಸ್ತಾಪ ಇಂದು, ನಿನ್ನೆಯದಲ್ಲ. 2022ರ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದ ಬಿಸಿಸಿಐ ಕೆಳಗಿಳಿಸಿದ ದಿನದಿಂದ ಈ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿದೆ ಎನ್ನಲಾಗುತ್ತಿದೆ.
ಮಾಧ್ಯಮಗಳ ಮುಂದೆ ಬಂದ ವಿರಾಟ್ ಕೊಹ್ಲಿ, ತಾವು ಏಕದಿನ ನಾಯಕರಾಗಿ ಮುಂದುವರೆಯಲು ಬಯಸಿದ್ದೆವು. ಆದರೆ ನನ್ನ ಜತೆ ಚರ್ಚಿಸದೇ ಬಿಸಿಸಿಐ ಆಯ್ಕೆ ಸಮಿತಿ ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಇನ್ನು ಇದಕ್ಕೂ ತಾವು ವಿರಾಟ್ ಕೊಹ್ಲಿಯವರು ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಮನವೊಲಿಸಲು ತಾವು ಪ್ರಯತ್ನಿಸಿದ್ದಾಗಿ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಹೇಳಿದ್ದರು. ಅದರೆ ಅಂತಹ ಚರ್ಚೆಗಳೇ ನಡೆದಿರಲಿಲ್ಲ, ಅದು ನನ್ನ ಸ್ವಂತ ನಿರ್ಧಾರವಾಗಿತ್ತು ಎಂದು ಕೊಹ್ಲಿ ಹೇಳಿದ್ದರು.
ಇನ್ನು ವಿರಾಟ್ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿದ ಬಳಿಕ, ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಲಿ ಎಂದು ಭಾರತ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಯಿತು.
ಇನ್ನು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಸೋಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ, ಭಾರತ ಟೆಸ್ಟ್ ತಂಡದ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಇನ್ನು ಇದರ ಬೆನ್ನಲ್ಲೇ ಕೊಹ್ಲಿ ಕೆಲಕಾಲ ಫಾರ್ಮ್ ಸಮಸ್ಯೆಯನ್ನು ಎದುರಿಸಿದ್ದರು.
ಕೆಲಕಾಲ ಬಿಡುವಿನ ಬಳಿಕ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿರುವ ವಿರಾಟ್ ಕೊಹ್ಲಿ, ರನ್ ಮಳೆ ಹರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಇನ್ನು ಈ ಐಪಿಎಲ್‌ನಲ್ಲಿ ಕೊಹ್ಲಿ 4 ಪಂದ್ಯಗಳನ್ನಾಡಿ 71ರ ಸರಾಸರಿಯಲ್ಲಿ 213 ರನ್ ಚಚ್ಚಿದ್ದಾರೆ.