ಚೆನ್ನೈ ಟೆಸ್ಟ್: 100 ವರ್ಷಕ್ಕೂ ಹಳೆಯದಾದ ಅಪರೂಪದ ದಾಖಲೆ ಬ್ರೇಕ್ ಮಾಡಿದ ಅಶ್ವಿನ್..!
ಚೆನ್ನೈ: ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದ್ದು, ನಾಲ್ಕನೇ ದಿನದಾಟದ ವೇಳೆ ರವಿಚಂದ್ರನ್ ಅಶ್ವಿನ್ ಈ ಶತಮಾನದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಚೆನ್ನೈ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಶ್ವಿನ್ 100 ವರ್ಷಕ್ಕೂ ಹಳೆಯದಾದ ದಾಖಲೆಯೊಂದನ್ನು ಬ್ರೇಕ್ ಮಾಡಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ದುಕೊಂಡು 578 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತ್ತು.
ಒಂದು ಹಂತದಲ್ಲಿ ಕೇವಲ 337 ರನ್‌ಗಳಿಗೆ ಆಲೌಟ್ ಆಗುವ ಮೂಲಕ 241 ರನ್‌ಗಳ ಭಾರೀ ಹಿನ್ನೆಡೆ ಅನುಭವಿಸಿದ್ದ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಿದೆ.
ಚೆನ್ನೈ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ತಿರುಗೇಟು ನೀಡುವತ್ತ ಆತಿಥೇಯ ಭಾರತ ತಂಡ ದಿಟ್ಟ ಹೆಜ್ಜೆಯಿಟ್ಟಿದೆ.
ಎರಡನೇ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ತಂಡಕ್ಕೆ ಲೋಕಲ್ ಹೀರೋ ಅಶ್ವಿನ್ ಮೊದಲ ಎಸೆತದಲ್ಲೇ ರೋರಿ ಬರ್ನ್ಸ್ ವಿಕೆಟ್ ಕಬಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಶಾಕ್ ನೀಡಿದರು.
ಇದರೊಂದಿಗೆ ಬರೋಬ್ಬರಿ 100 ವರ್ಷಕ್ಕೂ ಹಳೆಯದಾದ ದಾಖಲೆಯೊಂದನ್ನು ರವಿಚಂದ್ರನ್ ಅಶ್ವಿನ್ ಬ್ರೇಕ್ ಮಾಡಿದ್ದಾರೆ.
ಹೌದು, ಟೆಸ್ಟ್ ಇನಿಂಗ್ಸ್‌ವೊಂದರ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಈ ಶತಮಾನದ ಮೊದಲ ಸ್ಪಿನ್ನರ್ ಎನ್ನುವ ಅಪರೂಪದ ದಾಖಲೆಗೆ ತಮಿಳುನಾಡು ಮೂಲದ ಅಶ್ವಿನ್ ಭಾಜನರಾಗಿದ್ದಾರೆ.
ಇನಿಂಗ್ಸ್‌ನ ಮೊದಲ ಎಸೆತದಲ್ಲೇ ರೋರಿ ಬರ್ನ್ಸ್ ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಒಟ್ಟಾರೆ ಮೂರನೇ ಹಾಗೂ ಈ ಶತಮಾನದ ಮೊದಲ ಸ್ಪಿನ್ನರ್ ಎನ್ನುವ ದಾಖಲೆ ಅಶ್ವಿನ್ ಪಾಲಾಗಿದೆ.
ಬರ್ನ್ಸ್ ವಿಕೆಟ್ ಪಡೆಯುವುದರೊಂದಿಗೆ 1907ರಿಂದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಬೆರ್ಟ್ ವೋಲ್ಗರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಶ್ವಿನ್ ಅಳಿಸಿ ಹಾಕಿದ್ದಾರೆ.
ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಮೊದಲ ಸ್ಪಿನ್ನರ್ ಎನ್ನುವ ಹಿರಿಮೆ ಇಂಗ್ಲೆಂಡ್ ಬೌಲರ್ ಬಾಬಿ ಪೀಲ್ ಹೆಸರಿನಲ್ಲಿದೆ. 1888ರಲ್ಲಿ ಬಾಬಿ ಪೀಲ್ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ್ದರು.
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಶ್ವಿನ್ ಬರೋಬ್ಬರಿ 20600 ಎಸೆತಗಳ ಬಳಿಕ ಇದೇ ಮೊದಲ ಬಾರಿಗೆ ನೋ ಬಾಲ್ ಎಸೆದಿದ್ದಾರೆ. ಅಂದಹಾಗೆ ಅಶ್ವಿನ್ ಇದೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 5 ನೋಬಾಲ್ ಎಸೆದಿದ್ದಾರೆ.