ಟೀಂ ಇಂಡಿಯಾಗೆ ಬಿಗ್ ಶಾಕ್, ಜಿಂಬಾಬ್ವೆ ಪ್ರವಾಸದಿಂದ ಹೊರಬಿದ್ದ ಸ್ಟಾರ್ ಆಲ್ರೌಂಡರ್..!
ಹರಾರೆ: ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಟಿಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಗಾಯದ ಸಮಸ್ಯೆಯಿಂದಾಗಿ ಜಿಂಬ್ವಾಬೆ ಪ್ರವಾಸದಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ..
ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 18ರಿಂದ ಆರಂಭವಾಗಲಿದ್ದು, ಆಗಸ್ಟ್ 22ರವರೆಗೆ ನಡೆಯಲಿದೆ. ಏಕದಿನ ಸರಣಿಯು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಆಗಸ್ಟ್ 18, 20 ಹಾಗೂ 22 ರಂದು ನಡೆಯಲಿದೆ.
ಇದೀಗ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಜಿಂಬಾಬ್ವೆ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಮ್ಯಾಂಚೆಸ್ಟರ್‌ನಲ್ಲಿ ರಾಯಲ್ ಲಂಡನ್ ಏಕದಿನ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಟೀಂ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಕ್ಷೇತ್ರರಕ್ಷಣೆ ಮಾಡುವ ವೇಳೆ ಗಾಯಗೊಂಡಿದ್ದರು. ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ತಮಿಳುನಾಡು ಮೂಲದ ಆಟಗಾರ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದ್ದಾರೆ.
Washington Sundar
2021ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಾಷಿಂಗ್ಟನ್ ಸುಂದರ್, ಇದಾದ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ನಂತರ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಬಿಸಿಸಿಐ ಆಯ್ಕೆ ಸಮಿತಿ ಗಮನ ಸೆಳೆಯುವಲ್ಲಿ ಸುಂದರ್ ಯಶಸ್ವಿಯಾಗಿದ್ದರು.
ಇದರ ಬೆನ್ನಲ್ಲೇ ಜಿಂಬಾಬ್ವೆ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಜಿಂಬ್ವಾಬ್ವೆ ಪ್ರವಾಸಕ್ಕೂ ಮುನ್ನ ರಾಯಲ್ ಲಂಡನ್ ಒನ್ ಡೇ ಕಪ್‌ನಲ್ಲಿ ಪಾಲ್ಗೊಂಡಿದ್ದ ಸುಂದರ್, ಭುಜದ ಗಾಯಕ್ಕೆ ಒಳಗಾಗಿ ಮತ್ತೆ ಟೀಂ ಇಂಡಿಯಾ ಕೂಡಿಕೊಳ್ಳುವ ಅವಕಾಶ ಕೈಚೆಲ್ಲಿದ್ದಾರೆ.
ವಾಷಿಂಗ್ಟನ್ ಸುಂದರ್, ಜಿಂಬಾಬ್ವೆ ಪ್ರವಾಸದಿಂದ ಹೊರಬಿದ್ದಿದ್ದಾರೆ. ರಾಯಲ್ ಲಂಡನ್ ಒನ್ ಡೇ ಕಪ್ ಸರಣಿಯಲ್ಲಿನ ಲಂಕಾಷೈರ್ ಹಾಗೂ ವರ್ಸೆಸ್ಟರ್‌ಷೈರ್ ನಡುವಿನ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ಮಾಡುವ ವೇಳೆ ಸುಂದರ್ ಎಡ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳಿ ಪಿಟಿಐಗೆ ತಿಳಿಸಿವೆ ಎಂದು ವರದಿಯಾಗಿದೆ.