ನೋವಿನಿಂದಲೇ ವಿದಾಯ ಹೇಳಿದ ರೋಹಿತ್ ಶರ್ಮಾ, ಭಾರತೀಯ ಕ್ರಿಕೆಟ್‌ನಲ್ಲಿ ಹೀಗ್ಯಾಕೆ?
ಬಿಸಿಸಿಐ, ಆಯ್ಕೆ ಸಮಿತಿ ನಡುವಿನ ಹೈಡ್ರಾಮ ಬೆನ್ನಲ್ಲೇ ರೋಹಿತ್ ಶರ್ಮಾ ಅತೀವ ನೋವಿನಿಂದಲೇ ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದಾರೆ. ರೋಹಿತ್ ವಿದಾಯದ ಹಿಂದೆ ಬಹುದೊಡ್ಡ ಕಸರತ್ತು ನಡೆದಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಕೆಲ ವಿದಾಯಗಳು ಮತ್ತೆ ಮತ್ತೆ ಕಾಡುವುದೇಕೆ?

ಸ್ಫೋಟಕ ಬ್ಯಾಟ್ಸಮನ್, ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ ದಿಢೀರ್ ಘೋಷಿಸಿದ ಟೆಸ್ಟ್ ಕ್ರಿಕೆಟ್ ವಿದಾಯ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ನಾಯಕ ಸ್ಥಾನದಿಂದ ರೋಹಿತ್ ಶರ್ಮಾರನ್ನು ಕಿತ್ತೆಸೆಯಲು ಪ್ಲಾನ್,ಹೊಸ ನಾಯಕನ ಆಯ್ಕೆ ಕಸರತ್ತು ನಡೆಯುತ್ತಿದ್ದಂತೆ ರೋಹಿತ್ ಶರ್ಮಾ ದಿಢೀರ್ ಆಗಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಅಭಿಮಾನಿಗಳ ಬೇಸರಕ್ಕೆ ಕಾರಣಾಗಿದೆ.
ಜೂನ್ 20 ರಿಂದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದೆ. 5 ಪಂದ್ಯಗಳ ಸರಣಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ತಂಡದ ಆಯ್ಕೆ ಕಸರತ್ತು ಮಾಡುತ್ತಿದೆ. ಇಂಗ್ಲೆಂಡ್ ವಿರುದ್ದದ ಸರಣಿಗೆ ರೋಹಿತ್ ಶರ್ಮಾ ನಾಯಕತ್ವಕ್ಕಿಂತ ಹೊಸ ನಾಯಕತ್ವದಲ್ಲಿ ತಂಡ ಕಣಕ್ಕಿಳಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಈ ಕುರಿತು ಬಿಸಿಸಿಐ ಜೊತೆ ಸಭೆ ನಡೆಸಿ ವರದಿ ನೀಡಿದೆ. ಈ ಬೆಳವಣಿಗೆ ನಡೆಯುತ್ತಿದ್ದಂತೆ ರೋಹಿತ್ ಶರ್ಮಾ ಟೆಸ್ಟ್ ಮಾದರಿಗೆ ವಿದಾಯ ಹೇಳಿ, ದೂರ ಸರಿದಿದ್ದಾರೆ.
ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕುವ ನಿರ್ಧಾರವನ್ನು ಬಿಸಿಸಿಐಗೆ ಆಯ್ಕೆ ಸಮಿತಿ ತಿಳಿಸಿತ್ತು. ಇತ್ತ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ನಾಯಕನಾಗಿ ಮುಂದವರಿಯಲು ಬಯಸಿದ್ದರು. ಕೊನೆಯ ಪಕ್ಷ ರೋಹಿತ್ ಶರ್ಮಾ ಬ್ಯಾಟ್ಸಮನ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಆದರೆ ಯಾವಾಗ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕಿತ್ತು ಹಾಕಲಾಗುತ್ತಿದ್ದಂತೆ ಅನ್ನೋ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಯ್ತೋ, ಇದರ ಬೆನ್ನಲ್ಲೋ ರೋಹಿತ್ ಶರ್ಮಾ ವಿದಾಯ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೇ 7ರ ಸಂಜೆ 6 ಗಂಟೆ ಹೊತ್ತಿಗೆ ರೋಹಿತ್ ಶರ್ಮಾಗೆ ನಾಯಕತ್ವದಿಂದ ಕೊಕ್ ನೀಡಲಾಗುತ್ತಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. 7.30ರ ವೇಳೆಗೆ ರೋಹಿತ್ ಶರ್ಮಾ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದಾರೆ. ಆಯ್ಕೆ ಸಮಿತಿ ಹಾಗೂ ಬಿಸಿಸಿಐ ನಡೆಯನ್ನು ರೋಹಿತ್ ಶರ್ಮಾ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬಹುತೇಕರು, ದಿಗ್ಗಜನಾಗಿ ಗುರುತಿಸಿಕೊಂಡ ಹಲವರ ವಿದಾಯ ಹಿಂದೆ, ನಾಯಕತ್ವ ತ್ಯಜಿಸಿದರ ಹಿಂದೆ ವಿವಾದಗಳೇ ಎದ್ದು ಕಾಣುತ್ತಿದೆ. ಇದು ರಾಹುಲ್ ದ್ರಾವಿಡ್ ವಿದಾಯದಿಂದ ಹಿಡಿದು ಇದೀಗ ರೋಹಿತ್ ಶರ್ಮಾ ವರೆಗಿನ ಎಲ್ಲರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ ಹಿಂದೆ ಇದೇ ರೀತಿ ಹೈಡ್ರಾಮಗಳು, ರಾಜಕೀಯ ನಡೆದಿತ್ತು ಅನ್ನೋ ವರದಿಗಳಿವೆ. ಇದೀಗ ರೋಹಿತ್ ಶರ್ಮಾ ಇದೇ ವಿವಾದಗಳ ನಡುವೆ ಸೈಲೆಂಟ್ ಆಗಿ ವಿದಾಯ ಘೋಷಿಸಿ ದೂರ ಸರಿದಿದ್ದಾರೆ. ರೋಹಿತ್ ಶರ್ಮಾ ವಿದಾಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಥ್ಯಾಂಕ್ಯೂ ರೋಹಿತ್ ಟ್ರೆಂಡ್ ಆಗಿದೆ.