Rishabh Pant: ಭೀಕರ ಅಪಘಾತದ ಹೊರತಾಗಿಯೂ ವಿಕೆಟ್ ಕೀಪರ್ ಪಂತ್ ಬಚಾವಾಗಿದ್ದು ಹೇಗೆ..?
ನವದೆಹಲಿ(ಡಿ.30): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇಂದು(ಡಿ.30) ಮುಂಜಾನೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿದ್ದಾರೆ. ರಿಷಭ್ ಪಂತ್ ಪ್ರಯಾಣಿಸುತ್ತಿದ್ದ ಮರ್ಸಿಡೀಸ್ ಕಾರು ಡೆಲ್ಲಿ-ಡೆಹ್ರಾಡೂನ್ ಹೈವೇಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಕಾರು ಹೊತ್ತಿ ಉರಿದಿದೆ. ಹೀಗಿದ್ದೂ ಪಂತ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ಸಾಧ್ಯವಾಗಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್, ತಮ್ಮ ಪೋಷಕರನ್ನು ಭೇಟಿಯಾಗಲು ಡೆಲ್ಲಿಯಿಂದ ಉತ್ತರಖಂಡ್‌ನತ್ತ ಕಾರಿನಲ್ಲಿ ತೆರಳುತ್ತಿದ್ದರು. ಇಂದು ಮುಂಜಾನೆ 5.30ರ ವೇಳೆಗೆ ರಿಷಭ್ ಪಂತ್ ಪ್ರಯಾಣಿಸುತ್ತಿದ್ದ ಕಾರು ಡೆಲ್ಲಿ-ಡೆಹ್ರಾಡೂನ್ ಹೈವೇಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ಮರ್ಸಿಡೀಸ್ ಕಾರಿನಲ್ಲಿ ರಿಷಭ್ ಪಂತ್ ಒಬ್ಬರೇ ಪ್ರಯಾಣಿಸುತ್ತಿದ್ದರು. ತಮ್ಮ ತಾಯಿಗೆ ಸರ್ಫ್ರೈಸ್ ನೀಡುವ ಉದ್ದೇಶದಿಂದ ಮುಂಜಾನೆಯೇ ಮನೆಗೆ ತಲುಪುವ ಭರದಲ್ಲಿ ಈ ಅವಘಡ ಸಂಭವಿಸಿದೆ. ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು, ಸ್ಥಳದಲ್ಲಿಯೇ ಹೊತ್ತಿ ಉರಿದಿದೆ.
ಪರಿಣಾಮ ರಿಷಭ್ ಪಂತ್ ಅವರಿಗೆ ಮೈ ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಲ್ಲಲ್ಲಿ, ಕೆಲ ಭಾಗಗಳಲ್ಲಿ ರಿಷಭ್ ಪಂತ್‌ಗೆ ಬೆಂಕಿಯ ಶಾಖ ತಗುಲಿದ್ದು, ಸುಟ್ಟ ಗಾಯಗಳು ಕಂಡು ಬಂದಿವೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಚಲಾಯಿಸುತ್ತಿದ್ದ ರಿಷಭ್ ಪಂತ್ ಅವರೇ ತಿಳಿಸಿರುವಂತೆ, ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ವಿಚಾರವನ್ನು ಉತ್ತರಖಂಡ್‌ನ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(DGP) ಅಶೋಕ್ ಕುಮಾರ್ ಖಚಿತ ಪಡಿಸಿದ್ದಾರೆ.
ರಿಷಭ್ ಪಂತ್ ಏಕಾಂಗಿಯಾಗಿ ವೇಗವಾಗಿ ಕಾರು ಚಲಾಯಿಸುತ್ತಿದ್ದರಿಂದ, ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಜತಗೆ ತಕ್ಷಣವೇ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಕಾರಿನ ಗ್ಲಾಸ್ ಪುಡಿಪುಡಿಯಾಗಿದ್ದರಿಂದಾಗಿ ಕಾರಿನ ಕಿಟಕಿಯಿಂದ ಹೊರಬಂದು ಅಪಾಯದಿಂದ ಪಂತ್ ಪಾರಾಗಿದ್ದಾರೆ.
ಮೊದಲಿಗೆ ಪಂತ್ ಅವರನ್ನು ಡೆಲ್ಲಿ ರಸ್ತೆಯಲ್ಲಿರುವ ಸಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಥಮಿಕ ವರದಿಯ ಪ್ರಕಾರ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.