Asia Cup ಟೂರ್ನಿಗೂ ಮುನ್ನ ಪಾಕ್ ತಂಡಕ್ಕೆ ಬಿಗ್ ಶಾಕ್, ಸ್ಟಾರ್ ವೇಗಿ ಔಟ್..!
ಕರಾಚಿ: ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಯುಎಇ ಆತಿಥ್ಯವನ್ನು ವಹಿಸಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 27ರಿಂದ ಆರಂಭವಾಗಲಿದ್ದು, ಈ ಬಾರಿಯ ಟೂರ್ನಿಯು ದುಬೈ ಹಾಗೂ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಏಷ್ಯಾಕಪ್ ಟೂರ್ನಿಯ ಎರಡನೇ ದಿನ (ಆಗಸ್ಟ್ 28) ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ.
shaheen afridi
ಏಷ್ಯಾಕಪ್ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಗಾಯದ ಸಮಸ್ಯೆಯಿಂದಾಗಿ ಶಾಹೀನ್ ಅಫ್ರಿದಿ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾರಕ ವೇಗಿ ಶಾಹೀನ್ ಅಫ್ರಿದಿ, ಗಾಲೆಯಲ್ಲಿ ಶ್ರೀಲಂಕಾ ವಿರುದ್ದ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು.
ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಸಲಹಾ ಸಮಿತಿಯು ಶಾಹೀನ್ ಅಫ್ರಿದಿಗೆ 4-6 ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಿರುವುದರಿಂದ ಎಡಗೈ ವೇಗಿ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶಾಹೀನ್ ಅಫ್ರಿದಿ, ಏಷ್ಯಾಕಪ್ ಮಾತ್ರವಲ್ಲದೇ ತವರಿನಲ್ಲಿ ಇಂಗ್ಲೆಂಡ್ ವಿರುದ್ದ ನಡೆಯಲಿರುವ ಕ್ರಿಕೆಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಇದು ಪಾಕ್ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.
ಈ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹೊಸದಾಗಿ ನಡೆಸಿದ ಸ್ಕ್ಯಾನ್ ಪರಿಶೀಲನೆ ನಡೆಸಿದ ಪಿಸಿಬಿ ವೈದ್ಯಕೀಯ ಸಲಹಾ ಸಮಿತಿಯು ಶಾಹೀನ್ ಅಫ್ರಿದಿಯವರಿಗೆ 4ರಿಂದ 6 ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದೆ. ಹೀಗಾಗಿ ಶಾಹೀನ್ ಅಫ್ರಿದಿ, ಏಷ್ಯಾಕಪ್ ಹಾಗೂ ತವರಿನಲ್ಲಿ ಇಂಗ್ಲೆಂಡ್ ಎದುರಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಎದುರಿಸಲಿದೆ. ಆಗಸ್ಟ್ 28ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಲಿದೆ.