ಧೋನಿ-ಯುವಿ ಗೆಳೆತನ ಮುರಿದುಬೀಳಲು ಕಾರಣ ಏನು? ಈ ಇಬ್ಬರ ಸ್ನೇಹಕ್ಕೆ ಹುಳಿ ಹಿಂಡಿದ್ದು ಯಾರು?
ಕ್ರಿಕೆಟ್‌ನಲ್ಲಿ ಜಿಗ್ರಿ ದೋಸ್ತ್ ಆಗಿದ್ದ ಮಹೇಂದ್ರ ಧೋನಿ ಮತ್ತು ಯುವರಾಜ್ ಸಿಂಗ್ ಒಂದು ಹಂತದಲ್ಲಿ ಬೇರೆಯಾದರು. ಇದಕ್ಕೆ ಕಾರಣವೇನೆಂದು ನೋಡೋಣ.
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಧೋನಿ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. 2025 ಅಥವಾ 2026 ರ ಐಪಿಎಲ್ ಬಳಿಕ ಧೋನಿ ನಿವೃತ್ತಿ ಹೊಂದುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಕ್ರಿಕೆಟ್‌ನಲ್ಲಿ ಉತ್ತುಂಗವನ್ನು ಮುಟ್ಟಿದವರು ಮಹೇಂದ್ರ ಸಿಂಗ್ ಧೋನಿ. ಉದ್ದನೆಯ ಕೂದಲನ್ನು ಇಟ್ಟುಕೊಂಡು ಸಾಮಾನ್ಯ ವಿಕೆಟ್ ಕೀಪರ್ ಆಗಿ ಭಾರತ ತಂಡಕ್ಕೆ ಸೇರಿದರು. ಆರಂಭದಲ್ಲಿ ಕೆಲವು ಪಂದ್ಯಗಳಲ್ಲಿ ಅವಕಾಶ ಸಿಗುತ್ತದೆಯೇ? ಸಿಗುವುದಿಲ್ಲವೇ? ಎಂಬ ಸ್ಥಿತಿಯಲ್ಲಿತ್ತು. ಅದರ ನಂತರ ಅದ್ಭುತವಾಗಿ ಆಟವಾಡಿ ತಾನು ಯಾರು ಎಂದು ಸಾಬೀತುಪಡಿಸಿ ಇಂದು ಜಗತ್ತೇ ಕೊಂಡಾಡುವ ಹೀರೋ ಆಗಿದ್ದಾರೆ.
ಕ್ರಿಕೆಟ್ ಮೇಲಿನ ಪ್ರೀತಿ, ಬುದ್ಧಿವಂತಿಕೆ, ಡಿಆರ್‌ಎಸ್ ತೆಗೆದುಕೊಳ್ಳುವ ವಿಧಾನ, ಆಟಗಾರರನ್ನು ನಿರ್ವಹಿಸುವ ವಿಧಾನ, ಫೀಲ್ಡಿಂಗ್ ಸೆಟಪ್, ಬೌಲರ್‌ಗಳ ಬದಲಾವಣೆ ಮುಂತಾದ ತನ್ನ ಕ್ರಿಕೆಟ್ ಕೌಶಲ್ಯದ ಮೂಲಕ ಭಾರತ ತಂಡಕ್ಕೆ ಏಕದಿನ ಕ್ರಿಕೆಟ್ ವಿಶ್ವಕಪ್, ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಧೋನಿ ಐಪಿಎಲ್‌ನಲ್ಲಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಬಾರಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ.
ಧೋನಿ ಮೈದಾನದಲ್ಲಿ ಬ್ಯಾಟ್ ಮಾಡಲು ನಿಂತಿದ್ದಾರೆ ಎಂದರೆ ಅವರಿಗೆ ಬೌಲ್ ಮಾಡಲು ಎದುರಾಳಿ ಬೌಲರ್‌ಗಳ ಎದೆಯಲ್ಲಿ ಢವಢವ ಗುಡುತ್ತಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯನ್ ಲಾರಾ ಅವರನ್ನೇ ಬೆಚ್ಚಿಬೀಳಿಸಿದರು.
ಇದು ಒಂದು ಕಡೆಯಾದರೆ, ಕ್ರಿಕೆಟ್‌ನಲ್ಲಿ ಧೋನಿಯವರ ಆಪ್ತ ಸ್ನೇಹಿತ ಯುವರಾಜ್ ಸಿಂಗ್. ಹಲವು ಪಂದ್ಯಗಳಲ್ಲಿ ಧೋನಿ ಮತ್ತು ಯುವರಾಜ್ ಸಿಂಗ್ ಜೊತೆಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕಳೆದ 2011 ರ ಏಕದಿನ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ಯುವಿ ಮತ್ತು ಧೋನಿ ಜೊತೆಯಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು.
2008 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಯುವರಾಜ್ ಸಿಂಗ್ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಬೈಕ್ ಬಹುಮಾನ ನೀಡಲಾಯಿತು. ಅದರಲ್ಲಿ ಯುವರಾಜ್ ಸಿಂಗ್ ಮತ್ತು ಧೋನಿ ಇಬ್ಬರೂ ಮೈದಾನದಲ್ಲಿ ಸುತ್ತಿದರು. ಧೋನಿ ಆ ಬೈಕ್ ಓಡಿಸಿದರು.
ಆ ಮಟ್ಟಿಗೆ ಇಬ್ಬರೂ ಫ್ರೆಂಡ್ಸ್ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ಅವರಿಬ್ಬರ ನಡುವೆ ಮನಸ್ತಾಪ ಉಂಟಾಯಿತು. ಆಗಿನಿಂದ ಧೋನಿ ಹಾಗೂ ಯುವಿ ನಡುವಿನ ಬಾಂಧವ್ಯ ಅಷ್ಟಕಷ್ಟೇ ಎನ್ನುವಷ್ಟರ ಮಟ್ಟಿಗೆ ಬದಲಾಗಿ ಹೋಯಿತು.
2007ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ, ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಜಯಿಸಿತ್ತು. ಇದಾದ ಮರು ವರ್ಷವೇ ಅಂದರೆ 2008ರಲ್ಲಿ ಧೋನಿಯನ್ನು ಮೂರು ಮಾದರಿಯ ಭಾರತ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಪಟ್ಟ ಕಟ್ಟಲಾಯಿತು.
ಇದು ಯುವಿ ಹಾಗೂ ಧೋನಿ ನಡುವೆ ಕೊಂಚ ವೈಮನಸ್ಸು ಮೂಡಲು ಕಾರಣವಾಯಿತು ಎಂದು ವರದಿಯಾಗಿವೆ. ಯಾಕೆಂದರೆ ಧೋನಿಗಿಂತ ಮೊದಲು ಯುವರಾಜ್ ಸಿಂಗ್ ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಹೀಗಿದ್ದೂ ಯುವಿಯನ್ನು ಬಿಟ್ಟು ಧೋನಿಗೆ ಬಿಸಿಸಿಐ ನಾಯಕ ಪಟ್ಟ ಕಟ್ಟಿತು.
ಇನ್ನು 2014ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಯುವರಾಜ್ ಸಿಂಗ್, ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿದರು. ಪರಿಣಾಮ ಲಂಕಾ ಎದುರು ಸೋತು ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಾದ ಬಳಿಕ 2015ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಯುವರಾಜ್ ಸಿಂಗ್ ಸತತ ಶತಕ ಸಿಡಿಸಿದರೂ, ಅಂತಿಮ 15ರ ಆಟಗಾರರ ಪಟ್ಟಿಯಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾದಲ್ಲಿ ಯುವಿಗೆ ಸ್ಥಾನ ನೀಡಲಿಲ್ಲ. ಈ ಕಾರಣಕ್ಕಾಗಿಯೇ ಯುವಿ ಹಾಗೂ ಧೋನಿ ನಡುವೆ ಮನಸ್ತಾಪ ಇನ್ನಷ್ಟು ಹೆಚ್ಚಾಯಿತು ಎನ್ನಲಾಗುತ್ತಿದೆ.
ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಅವಕಾಶ ಸಿಕ್ಕಾಗಲೆಲ್ಲಾ ಧೋನಿ ಮೇಲೆ ಕಿಡಿಕಾರುತ್ತಲೇ ಬಂದಿದ್ದಾರೆ. ಆದರೆ ಧೋನಿ ಮಾತ್ರ ಇದುವರೆಗೂ ಯುವಿ ಹಾಗೂ ಯುವಿ ತಂದೆಯ ಟೀಕೆಗಳ ಬಗ್ಗೆ ತುಟಿಪಿಟಿಕ್ ಎಂದಿಲ್ಲ.