IPL 2026 Playoffs: ಆರ್‌ಸಿಬಿಯ ಮುಂದಿನ ಪಂದ್ಯ ಯಾವುದು? ಯಾವಾಗ? ಎದುರಾಳಿ ಯಾರು?
ಹೈದರಾಬಾದ್: ಐಪಿಎಲ್ 2026ರ ಸೀಸನ್‌ನ ಮೊದಲ ಕ್ವಾಲಿಫೈಯರ್ ಪಂದ್ಯದ ಚಿತ್ರಣ ಈಗ ಸ್ಪಷ್ಟವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಪ್ಲೇಆಫ್ ಲೆಕ್ಕಾಚಾರಗಳು ಖಚಿತಗೊಂಡಿವೆ. ಆರ್‌ಸಿಬಿಯ ಮುಂದಿನ ಪಂದ್ಯ ಎಲ್ಲಿ? ಯಾವಾಗ? ಯಾರು ಎದುರಾಳಿ ನೋಡೋಣ ಬನ್ನಿ.

ಸನ್‌ರೈಸರ್ಸ್‌ಗೆ ಶರಣಾದ ಆರ್‌ಸಿಬಿ
ಆರ್‌ಸಿಬಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ಎದುರು 55 ರನ್ ಅಂತರದ ಸೋಲಿನ ಹೊರತಾಗಿಯೂ ಲೀಗ್ ಹಂತದ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಕ್ವಾಲಿಫೈಯರ್-1 ಪಂದ್ಯಕ್ಕೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಜ್ಜಾಗಿದೆ.

ಮೇ 26ರಂದು ಕ್ವಾಲಿಫೈಯರ್-1 ರಲ್ಲಿ ಆರ್‌ಸಿಬಿ-ಗುಜರಾತ್ ಫೈಟ್
ಹೌದು, ಮೇ 26ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಮ್ಯಾಚ್ ವೀಕ್ಷಿಸಬಹುದು.
ಕ್ವಾಲಿಫೈಯರ್-1 ಗೆದ್ದ ತಂಡ ನೇರವಾಗಿ ಫೈನಲ್‌ಗೆ
ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಸೋತ ತಂಡಕ್ಕೆ ಫೈನಲ್ ತಲುಪಲು ಮತ್ತೊಂದು ಅವಕಾಶ ಸಿಗಲಿದೆ. ಎಲಿಮಿನೇಟರ್ ಪಂದ್ಯದ ವಿಜೇತರನ್ನು ಅವರು ಎರಡನೇ ಕ್ವಾಲಿಫೈಯರ್‌ನಲ್ಲಿ ಎದುರಿಸಬೇಕಾಗುತ್ತದೆ.
ಎಲಿಮಿನೇಟರ್, ಎರಡನೇ ಕ್ವಾಲಿಫೈಯರ್ ಪಂದ್ಯಗಳು
ಬುಧವಾರ, ಮೇ 27ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಅಥವಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಲ್ಲಿ ಒಂದನ್ನು ಎದುರಿಸಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯವು ಶುಕ್ರವಾರ, ಮೇ 29ರಂದು ನಡೆಯಲಿದ್ದು, ಫೈನಲ್ ಪಂದ್ಯ ಇದೇ ತಿಂಗಳ 31ರಂದು ನಡೆಯಲಿದೆ.
ನೆಟ್ ರನ್‌ರೇಟ್ ಆಧಾರದಲ್ಲಿ ಮೊದಲ 3 ಸ್ಥಾನ ನಿರ್ಧಾರ
ಬೆಂಗಳೂರು, ಗುಜರಾತ್ ಮತ್ತು ಹೈದರಾಬಾದ್, ಮೂರೂ ತಂಡಗಳು ತಲಾ 18 ಅಂಕಗಳನ್ನು ಗಳಿಸಿದ್ದವು. ಹೀಗಾಗಿ, ಉತ್ತಮ ನೆಟ್ ರನ್ ರೇಟ್ ಆಧಾರದ ಮೇಲೆ ಮೊದಲ ಮೂರು ಸ್ಥಾನಗಳು ನಿರ್ಧಾರವಾದವು. ಇದರನ್ವಯ, ಆರ್‌ಸಿಬಿ ಮೊದಲ ಸ್ಥಾನ, ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನ ಪಡೆದುಕೊಂಡಿವೆ.
ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಪ್
ಐಪಿಎಲ್‌ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 55 ರನ್‌ಗಳಿಂದ ಸೋಲಿಸಿತು. ಹೈದರಾಬಾದ್ ನೀಡಿದ 255 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬೆಂಗಳೂರು ತಂಡ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನ ಹೊರತಾಗಿಯೂ, ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

