'ಈ ಟೀಂ ಕಪ್ ಗೆಲ್ಲುತ್ತೆ': ಐಪಿಎಲ್ ಫೈನಲ್‌ಗೂ ಮುನ್ನ ಭವಿಷ್ಯ ನುಡಿದ ಡೇವಿಡ್ ವಾರ್ನರ್!
ಬೆಂಗಳೂರು: 2025ರ ಐಪಿಎಲ್ ಟೂರ್ನಿಯಲ್ಲಿ ಇದೀಗ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳಷ್ಟೇ ಬಾಕಿ ಉಳಿದಿದೆ. ಹೀಗಿರುವಾಗಲೇ ಆಸೀಸ್ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಸಲ ಐಪಿಎಲ್ ಕಪ್ ಗೆಲ್ಲೋದು ಯಾರು ಎನ್ನುವ ಬಗ್ಗ ಭವಿಷ್ಯ ನುಡಿದಿದ್ದಾರೆ.

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ.
ಇನ್ನೊಂದೆಡೆ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೊಚ್ಚಲ ಐಪಿಎಲ್ ಟ್ರೋಫಿ ಕನಸು ಕಾಣುತ್ತಿರುವ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಎರಡನೇ ಕ್ವಾಲಿಫೈಯರ್ ಪಂದ್ಯ ಗೆಲ್ಲುವ ತಂಡವು ಜೂನ್ 03ರಂದು ಪ್ರಶಸ್ತಿ ಸುತ್ತಿಗಾಗಿ ನಡೆಯುವ ಕಾದಾಟದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
2016ರಲ್ಲಿ ಆರ್‌ಸಿಬಿ ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲುವ ಕನಸನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ನುಚ್ಚುನೂರು ಮಾಡಿತ್ತು. ಆಗ ಸನ್‌ರೈಸರ್ಸ್ ಹೈದರಾಬಾದ್ ಕ್ಯಾಪ್ಟನ್ ಆಗಿದ್ದವರು ಡೇವಿಡ್ ವಾರ್ನರ್. ಇದೀಗ ವಾರ್ನರ್, ಈ ಬಾರಿಯ ಐಪಿಎಲ್ ಚಾಂಪಿಯನ್ ಆಗೋರು ಯಾರು? ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಯಾರಾಗಬಹುದು ಎನ್ನುವುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಆಸೀಸ್ ಎಡಗೈ ಬ್ಯಾಟರ್‌ಗೆ ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲೋರು ಯಾರು ಎನ್ನುವ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ವಾರ್ನರ್, ನನಗನಿಸುತ್ತೆ ಈ ಸಲ ಆರ್‌ಸಿಬಿ ಹಾಗೂ ಜೋಶ್ ಹೇಜಲ್‌ವುಡ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆಲ್ಲಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.
ಆಸೀಸ್ ವೇಗಿ ಜೋಶ್ ಹೇಜಲ್‌ವುಡ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೇಜಲ್‌ವುಡ್ 11 ಪಂದ್ಯಗಳನ್ನಾಡಿ 21 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.