ಐಪಿಎಲ್ ಮೆಗಾ ಹರಾಜಿಗೂ ಮುನ್ನ 3 ಹೊಸ ಹೆಸರು ಸೇರ್ಪಡೆ! ಒಬ್ಬರ ಮೇಲೆ ಆರ್‌ಸಿಬಿ ಕಣ್ಣು?
ಜೆಡ್ಡಾ: 2025ರ ಐಪಿಎಲ್ ಮೆಗಾ ಹರಾಜಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಕೊನೆಯ ಕ್ಷಣದಲ್ಲಿ ಮೆಗಾ ಹರಾಜಿಗೆ ಹೊಸದಾಗಿ ಮೂವರ ಹೆಸರುಗಳು ಸೇರ್ಪಡೆಯಾಗಿದ್ದು, ಓರ್ವ ಆಟಗಾರನ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಇದೇ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಬಾರಿಯ ಮೆಗಾ ಹರಾಜಿಗೆ ಮೊದಲು 1574 ಆಟಗಾರರು ಹೆಸರು ನೋಂದಾಯಿಸಿದ್ದರು.
1574 ಆಟಗಾರರ ಪೈಕಿ ಬಿಸಿಸಿಐ 574 ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಐಪಿಎಲ್ ಮೆಗಾ ಹರಾಜಿಗೆ ಅಂತಿಮಗೊಳಿಸಿತ್ತು. ಈ ಪೈಕಿ 10 ಫ್ರಾಂಚೈಸಿಗಳು ಗರಿಷ್ಠ 204 ಆಟಗಾರರನ್ನು ಖರೀದಿಸಲು ಅವಕಾಶವಿದೆ.
ಐಪಿಎಲ್ ಮೆಗಾ ಹರಾಜಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಇದೀಗ ಹೊಸದಾಗಿ ಮೂರು ಹೆಸರುಗಳು ಸೇರ್ಪಡೆಯಾಗಿವೆ. ಭಾರತೀಯ ಮೂಲದ ಯುಎಸ್‌ಎ ಕ್ರಿಕೆಟಿಗ ಸೌರಭ್ ನೇತ್ರಾವಲ್ಕರ್, ಇಂಗ್ಲೆಂಡ್ ಮಾರಕ ವೇಗಿ ಜೋಫ್ರಾ ಆರ್ಚರ್ ಮತ್ತು ಮುಂಬೈ ಮೂಲದ ಹಾರ್ದಿಕ್ ತೋಮರೆ ಅವರ ಹೆಸರು ಸೇರ್ಪಡೆಯಾಗಿದೆ.
ಗಾಯದಿಂದ ಚೇತರಿಸಿಕೊಂಡು ಇಂಗ್ಲೆಂಡ್ ತಂಡ ಕೂಡಿಕೊಂಡಿರುವ ಜೋಫ್ರಾ ಆರ್ಚರ್, ಇದೀಗ ಕೊನೆಯ ಕ್ಷಣದಲ್ಲಿ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆರ್ಚರ್ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿಯಾಗಿದ್ದು, ನವೆಂಬರ್ 24ರಂದು ಆರನೇ ಸೆಟ್‌ನಲ್ಲಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೋಫ್ರಾ ಆರ್ಚರ್ 2023ರ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದಾಗಿ 2024ರ ಐಪಿಎಲ್‌ನಿಂದ ಹೊರಬಿದ್ದಿದ್ದರು.
ಜೋಫ್ರಾ ಆರ್ಚರ್ ಅವರೊಬ್ಬ ಮಾರಕ ವೇಗದ ಬೌಲರ್ ಆಗಿದ್ದು, ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಆರ್ಚರ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಮುಂದಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಹಾಗೂ ಯಶ್ ದಯಾಳ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಇದೀಗ ಐಪಿಎಲ್ ಮೆಗಾ ಹರಾಜಿಗೆ 83 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.