ಬೆಂಗ್ಳೂರಲ್ಲಿ RCB vs PBKS ಮ್ಯಾಚ್, ಎಲ್ಲರ ಚಿತ್ತ ಕೊಹ್ಲಿಯತ್ತ..!
ಬೆಂಗಳೂರು: 2024ನೇ ಸಾಲಿನ ಐಪಿಎಲ್ ಟೂರ್ನಿಗೆ ಈಗಾಗಲೇ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಆರ್‌ಸಿಬಿ ಇದೀಗ ಎರಡನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಇದೀಗ ಎಲ್ಲರ ಚಿತ್ತ ವಿರಾಟ್ ಕೊಹ್ಲಿಯತ್ತ ನೆಟ್ಟಿದೆ.
ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತವರಿನಲ್ಲಿ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ.
ಹೌದು, ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಈಗಾಗಲೇ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಘಾತಕಾರಿ ಸೋಲು ಅನುಭವಿಸಿರುವ ಆರ್‌ಸಿಬಿ, ಇದೀಗ ತವರಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯುವ ಉತ್ಸಾಹದಲ್ಲಿದೆ.
ಆರ್‌ಸಿಬಿ ತವರಿನಲ್ಲಿ ಗೆಲುವಿನ ಖಾತೆ ತೆರೆಯಬೇಕಿದ್ದರೇ, ವಿರಾಟ್ ಕೊಹ್ಲಿ ಮತ್ತೊಮ್ಮೆ ಅಬ್ಬರಿಸಬೇಕಿದೆ. ಹೀಗಾಗಿ ಎಲ್ಲರ ಚಿತ್ತ ವಿರಾಟ್ ಮೇಲೆ ನೆಟ್ಟಿದೆ. ಮೊದಲ ಪಂದ್ಯದ ನಿರಾಸೆಯನ್ನು ಮರೆತು ಕೊಹ್ಲಿ ಅಬ್ಬರಿಸಲು ರೆಡಿಯಾಗಿದ್ದಾರೆ.
ಬೆಂಗಳೂರು ವಿರಾಟ್ ಕೊಹ್ಲಿ ಪಾಲಿಗೆ ಎರಡನೇ ತವರು ಎನಿಸಿಕೊಂಡಿದ್ದು, ಆರ್‌ಸಿಬಿ ತಂಡಕ್ಕೆ ಹಲವು ಬಾರಿ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿ ಆಟ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಇನ್ನು ಆರ್‌ಸಿಬಿ ಗೆಲುವಿನ ಖಾತೆ ತೆರೆಯಲು ಕೊಹ್ಲಿಯೊಬ್ಬರೇ ಅಬ್ಬರಿಸಿದರೆ ಸಾಲದು. ಇವರ ಜತೆಗೆ ನಾಯಕ ಫಾಫ್ ಡು ಪ್ಲೆಸಿಸ್ ಕೂಡಾ ಮಿಂಚಬೇಕಿದೆ. ಕಳೆದ ಪಂದ್ಯದಲ್ಲಿ ಫಾಫ್ ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದರು.
ಆರ್‌ಸಿಬಿ ತಂಡದ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್, ಸಿಎಸ್‌ಕೆ ಎದುರಿನ ಪಂದ್ಯದಲ್ಲಿ ಸಾಕಷ್ಟು ದುಬಾರಿಯಾಗಿದ್ದರು. ಹೀಗಾಗಿ ಪಂಜಾಬ್ ಬಲಾಢ್ಯ ಬ್ಯಾಟಿಂಗ್ ಪಡೆ ಕಟ್ಟಿಹಾಕಬೇಕಿದ್ದರೇ, ಸಿರಾಜ್ ಅಮೋಘ ಬೌಲಿಂಗ್ ಪ್ರದರ್ಶನ ತೋರಬೇಕಿದೆ.