RCBಗೆ 5ನೇ ದಿಗ್ವಿಜಯ; ಚೆನ್ನೈ ಎದುರು ಕೇವಲ ಇಷ್ಟು ರನ್ ಅಂತರದಲ್ಲಿ ಗೆದ್ರೆ ಬೆಂಗಳೂರು ಪ್ಲೇ ಆಫ್ ಫಿಕ್ಸ್..!
ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ 5ನೇ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಆಸೆಯನ್ನು ಮತ್ತಷ್ಟು ಜೀವಂತವಾಗಿರಿಸಿಕೊಂಡಿದೆ. ಇದೀಗ ಆರ್‌ಸಿಬಿ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ನೋಡೋಣ ಬನ್ನಿ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು 47 ರನ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಫಾಫ್ ಪಡೆ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.
ಚೆನ್ನೈ ಎದುರಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅರ್‌ಸಿಬಿಯ ಇನ್ನೊಂದು ಗೆಲುವು ತಂಡ ಪ್ಲೇ ಆಫ್ ಪ್ರವೇಶಿಸುವಂತೆ ಮಾಡಲಿದೆ. ಆದರೆ ಆರ್‌ಸಿಬಿಗೆ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ, ಸಿಎಸ್‌ಕೆ ತಂಡವನ್ನು ಸೋಲಿಸುವುದು ಮಾತ್ರವಲ್ಲದೇ ನೆಟ್ ರನ್‌ರೇಟ್ ಕೂಡಾ ಉತ್ತಮ ಪಡಿಸಿಕೊಳ್ಳಬೇಕಿದೆ.
13 ಪಂದ್ಯಗಳನ್ನಾಡಿ ಆರ್‌ಸಿಬಿ 7 ಸೋಲು ಹಾಗೂ 6 ಗೆಲುವು ಸಹಿತ 12 ಅಂಕಗಳನ್ನು ಗಳಿಸಿದೆ. ಡೆಲ್ಲಿ ಎದುರಿನ 47 ರನ್ ಅಂತರದ ಗೆಲುವು ಆರ್‌ಸಿಬಿ ತಂಡದ ನೆಟ್ ರನ್‌ರೇಟ್(+0.387) ಕೂಡಾ ಉತ್ತಮ ಪಡಿಸಿಕೊಂಡಿದೆ.
ಇದೀಗ ಆರ್‌ಸಿಬಿ ತಂಡವು ತನ್ನ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇದು ಉಭಯ ತಂಡಗಳ ಪಾಲಿಗೆ ಒಂದು ರೀತಿ ವರ್ಚುವಲ್ ನಾಕೌಟ್ ಪಂದ್ಯ ಎನಿಸಿಕೊಳ್ಳಲಿದೆ.
ಇನ್ನು ಆರ್‌ಸಿಬಿ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ? ಯಾವ ತಂಡ ಸೋತರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಲಾಭವಾಗಲಿದೆ. ಸಿಎಸ್‌ಕೆ ಎದುರು ಎಷ್ಟು ರನ್ ಅಂತರದಲ್ಲಿ ಗೆದ್ರೆ ಆರ್‌ಸಿಬಿ ಪ್ಲೇ ಆಫ್‌ಗೇರಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ಗೇರಬೇಕಿದ್ದರೇ, ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಪಾಲಿನ ಎರಡು ಪಂದ್ಯಗಳಲ್ಲಿ ಎರಡೂ ಜಯಿಸಬೇಕು ಅಥವಾ ಒಂದು ಜಯಿಸಿದರೂ ಆರ್‌ಸಿಬಿ ಪ್ಲೇ ಆಫ್ ಹಾದಿ ಸುಗಮವಾಗಲಿದೆ.
ಇನ್ನು ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 6 ಗೆಲುವಿನೊಂದಿಗೆ 12 ಅಂಕ ಹೊಂದಿದೆ. ಲಖನೌ ಮುಂದಿನ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಲಖನೌ ತಂಡವು ಒಂದು ಪಂದ್ಯ ಸೋತರೂ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಯಾಕೆಂದರೆ ಲಖನೌ ತಂಡದ ನೆಟ್ ರನ್‌ರೇಟ್ (-0.769) ಆರ್‌ಸಿಬಿಗಿಂತ ಕೆಳಗಿದೆ.
ಹೀಗಾದಲ್ಲಿ ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯ ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ವರ್ಚುವಲ್ ನಾಕೌಟ್ ಪಂದ್ಯ ಎನಿಸಿಕೊಳ್ಳಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸದ್ಯ 13 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸಿಎಸ್‌ಕೆ ಪಡೆಯ ನೆಟ್ ರನ್‌ರೇಟ್ +0.528 ಆಗಿದೆ. ಇನ್ನು ಆರ್‌ಸಿಬಿ ರನ್‌ರೇಟ್(+0.387) ಆಗಿರುವುದರಿಂದ ಆರ್‌ಸಿಬಿ ಕೊಂಚ ದೊಡ್ಡ ಅಂತರದ ಗೆಲುವು ಸಾಧಿಸಬೇಕಿದೆ.
ಹೀಗಾಗಿ ಆರ್‌ಸಿಬಿ ತಂಡವು ಸಿಎಸ್‌ಕೆ ತಂಡದ ನೆಟ್ ರನ್‌ರೇಟ್ ಹಿಂದಿಕ್ಕಬೇಕಿದ್ದರೇ, ಉದಾಹರಣೆಗೆ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 200 ರನ್ ಬಾರಿಸಿದರೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 18 ರನ್ ಅಂತರದಲ್ಲಿ ಸೋಲಿಸಬೇಕಿದೆ.
ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲು ಬೌಲಿಂಗ್ ಮಾಡುವ ಪರಿಸ್ಥಿತಿ ಎದುರಾದರೆ, ಚೆನ್ನೈ ಉದಾಹರಣೆ 200 ರನ್ ಗುರಿ ನೀಡಿದರೆ 18.1 ಓವರ್‌ಗಳಲ್ಲಿ ಅಂದರೆ 11 ಎಸೆತ ಬಾಕಿ ಇರುವಂತೆಯೇ ಗೆಲುವು ದಾಖಲಿಸಿದರೆ ಆರ್‌ಸಿಬಿ ಅಧಿಕೃತವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.
ಸತತ 5 ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೇರುತ್ತಾ ಅಥವಾ ಮತ್ತೆ ಸಿಎಸ್‌ಕೆ ಶರಣಾಗುತ್ತಾ ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.