CSK ಸೋಲುತ್ತಿದ್ದಂತೆಯೇ RCB ಪ್ಲೇ ಆಫ್ ಕನಸಿಗೆ ಆನೆ ಬಲ..! ಇಲ್ಲಿದೆ ನೋಡಿ ಬೆಂಗಳೂರು ತಂಡಕ್ಕೆ 5 ರೀತಿ ಅವಕಾಶ
ಬೆಂಗಳೂರು: ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ 4 ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋಲುತ್ತಿದ್ದಂತೆಯೇ ಅರ್‌ಸಿಬಿ ಪ್ಲೇ ಆಫ್ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ಸಿಎಸ್‌ಕೆ ಸೋಲು ಆರ್‌ಸಿಬಿಗೆ ಲಾಭ ಆಗಿದ್ದು ಹೇಗೆ? ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ ನೋಡೋಣ ಬನ್ನಿ.
ಆರಂಭದಲ್ಲಿ 8 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಕೊನೆಗೂ ಎಚ್ಚೆತ್ತುಕೊಂಡು ಸತತ 4 ಪಂದ್ಯಗಳನ್ನು ಜಯಿಸಿದೆ. ಈ ಮೂಲಕ 12 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 7 ಸೋಲುಗಳೊಂದಿಗೆ 7ನೇ ಸ್ಥಾನದಲ್ಲಿಯೇ ಮುಂದುವರೆದಿದೆ.
ಇದೆಲ್ಲದರ ನಡುವೆ ಗುಜರಾತ್ ಟೈಟಾನ್ಸ್ ಎದುರು ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 35 ರನ್ ಅಂತರದ ಸೋಲು ಕಂಡಿದ್ದು, ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಮತ್ತಷ್ಟು ಅನುಕೂಲವಾದಂತೆ ಆಗಿದೆ.
ಸದ್ಯ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ತಲಾ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಮುಂದುವರೆದಿವೆ.
ಇನ್ನೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ 14 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 12 ಅಂಕಗಳೊಂದಿಗೆ ಕ್ರಮವಾಗಿ ಮೂರು ಹಾಗೂ 4ನೇ ಸ್ಥಾನ ಪಡೆದಿವೆ. ಇನ್ನು ಆರ್‌ಸಿಬಿ ತನ್ನ ಪಾಲಿನ ಎರಡು ಪಂದ್ಯ ಜಯಿಸಿದರೆ ಗರಿಷ್ಠ 14 ಅಂಕ ಗಳಿಸಬಹುದಾಗಿದೆ. ಇನ್ನುಳಿದ ಫಲಿತಾಂಶ ಆರ್‌ಸಿಬಿ ಪರವಾಗಿ ಬಂದರೆ ಆರ್‌ಸಿಬಿ ತಂಡವನ್ನು ಪ್ಲೇ ಆಫ್ ರೇಸ್‌ನಿಂದ ತಡೆಯುವವರು ಯಾರೂ ಇಲ್ಲ.
ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ;
ಮೊದಲ ನಿಯಮ: ಆರ್‌ಸಿಬಿ ತಂಡವು ತನ್ನ ಪಾಲಿನ ಇನ್ನುಳಿದ ಎರಡು ಪಂದ್ಯಗಳನ್ನು ಜಯಿಸಬೇಕು. ಈ ಪೈಕಿ ಒಂದು ಪಂದ್ಯ ಸೋತರೂ ಆರ್‌ಸಿಬಿ ಪ್ಲೇ ಆಫ್ ಕನಸು ಭಗ್ನವಾಗಲಿದೆ.
ಆರ್‌ಸಿಬಿ ತಂಡವು ಪ್ಲೇ ಆಫ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಜತೆ ಸ್ಪರ್ಧೆಗಿಳಿದಿದೆ.
ಎರಡನೇ ನಿಯಮ:
ಈಗ ಗುಜರಾತ್ ಎದುರು ಚೆನ್ನೈ ಸೋಲು ಕಂಡಿದ್ದರಿಂದ ಸಿಎಸ್‌ಕೆ ಪಡೆಗೆ ಇನ್ನು ಎರಡು ಪಂದ್ಯಗಳು ಮಾತ್ರ ಉಳಿದಿವೆ. ಸಿಎಸ್‌ಕೆ ಮೊದಲಿಗೆ ರಾಜಸ್ಥಾನ ರಾಯಲ್ಸ್ ಹಾಗೂ ಕೊನೆಯಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ತಂಡವು ತವರಿನಲ್ಲಿ ಸಿಎಸ್‌ಕೆ ತಂಡವನ್ನು ಎದುರಿಸಲಿರುವುದು ಆರ್‌ಸಿಬಿಗೆ ತವರಿನ ಲಾಭ ಪಡೆಯಲು ಸಹಾಯವಾಗಲಿದೆ.
ಮೂರನೇ ನಿಯಮ:
ಲಖನೌ ತಂಡ ಕೂಡಾ ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದಿಲ್ಲ. ಲಖನೌ ತಂಡವು 12 ಪಂದ್ಯಗಳಲ್ಲಿ 6 ಗೆಲುವು ಹಾಗೂ 6 ಸೋಲು ಸಹಿತ 12 ಅಂಕ ಹೊಂದಿದೆ. ಲಖನೌ ಇನ್ನೆರಡು ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯವನ್ನಾದರೂ ಸೋಲಬೇಕು. ಒಂದುವೇಳೆ ಲಖನೌ ಎರಡೂ ಪಂದ್ಯ ಗೆದ್ದರೇ ಆರ್‌ಸಿಬಿ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ.
ನಾಲ್ಕನೇ ನಿಯಮ:
ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ 12 ಪಂದ್ಯಗಳಲ್ಲಿ 6 ಗೆಲುವು ಹಾಗೂ 6 ಸೋಲು ಸಹಿತ 12 ಅಂಕ ಹೊಂದಿದೆ. ಡೆಲ್ಲಿ ತಂಡವು ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯ ಸೋಲಬೇಕು.
ಆರ್‌ಸಿಬಿ ತಂಡವು ಮುಂದಿನ ಪಂದ್ಯದಲ್ಲಿ ಡೆಲ್ಲಿಯನ್ನು ಎದುರಿಸಲಿದ್ದು, ಸೋಲುವ ತಂಡ ಪ್ಲೇ ಆಫ್ ರೇಸ್‌ನಿಂದ ಹೊರಬೀಳಲಿದೆ. ಇನ್ನೊಂದು ಪಂದ್ಯದಲ್ಲಿ ಡೆಲ್ಲಿ ಹಾಗೂ ಲಖನೌ ಮುಖಾಮುಖಿಯಾಗಲಿದ್ದು. ಒಂದು ವೇಳೆ ಲಖನೌ ಗೆದ್ದರೆ ಆರ್‌ಸಿಬಿಗೆ ಅನುಕೂಲವಾಗಲಿದೆ.
ಐದನೇ ನಿಯಮ:
ಆರ್‌ಸಿಬಿ ತಂಡಕ್ಕೆ ಅದೃಷ್ಟ ಕೈಹಿಡಿದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಲು ಅವಕಾಶವಿದೆ. ಹೀಗಾಗಬೇಕಿದ್ದರೇ, ಆರೆಂಜ್ ಆರ್ಮಿ ಇನ್ನುಳಿದ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದ ಸೋಲು ಅನುಭವಿಸಬೇಕು. ಆಗ ನೆಟ್ ರನ್‌ರೇಟ್‌ನಲ್ಲಿ ಆರ್‌ಸಿಬಿ ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಪ್ಲೇ ಆಫ್‌ಗೇರಲಿದೆ.