IPL 2024 Breaking: RCB ಎದುರಿನ ಉದ್ಘಾಟನಾ ಪಂದ್ಯಕ್ಕೂ ಮುನ್ನ CSK ಪಡೆಗೆ ಬಿಗ್ ಶಾಕ್..!
ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
2024ನೇ ಸಾಲಿನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.
ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಆರ್‌ಸಿಬಿ ಮಣಿಸಿ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿತ್ತು.
ಹೀಗಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ ಗಾಯದ ಸಮಸ್ಯೆಯಿಂದಾಗಿ ಮುಂದಿನ 8 ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಬಿದ್ದಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ನೀಡಿರುವ ಪ್ರಕಟಣೆಯಂತೆ, ಕಳೆದ ಫೆಬ್ರವರಿ 24ರಂದು ಆಸ್ಟ್ರೇಲಿಯಾ ಎದುರಿನ ಎರಡನೇ ಟಿ20 ಪಂದ್ಯದ ವೇಳೆ ಎಡಗೈ ಬ್ಯಾಟರ್ ಡೆವೊನ್ ಕಾನ್‌ವೇ, ಎಡ ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದಾರೆ. ಅವರು ಈ ಬಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮುಂದಿನ 8 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ತಿಳಿಸಿದೆ.
"ಡೆವೊನ್ ಕಾನ್‌ವೇ ಈ ವಾರ ಎಡಗೈ ಹೆಬ್ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸಾಕಷ್ಟು ಸ್ಕ್ಯಾನ್ ಹಾಗೂ ತಜ್ಞ ವೈದ್ಯರ ಸಲಹೆ ಮೇರೆಗೆ ಅವರಿಗೆ ಮುಂದಿನ ಎಂಟು ವಾರಗಳ ಕಾಲ ಕ್ರಿಕೆಟ್‌ನಿಂದ ವಿಶ್ರಾಂತಿ ನೀಡಲು ತೀರ್ಮಾನಿಸಲಾಗಿದೆ" ಎಂದು ಕಿವೀಸ್ ಕ್ರಿಕೆಟ್ ಬೋರ್ಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಡೆವೋನ್ ಕಾನ್‌ವೇ 2024ರ ಐಪಿಎಲ್ ಟೂರ್ನಿಯ ದ್ವಿತಿಯಾರ್ಧದ ವೇಳೆಗೆ ಸಿಎಸ್‌ಕೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಅದರೆ ಆರಂಭಿಕ ಪಂದ್ಯಗಳಲ್ಲಿ ಕಾನ್‌ವೇ ಅನುಪಸ್ಥಿತಿ ತಂಡವನ್ನು ಬಹುವಾಗಿ ಕಾಡುವ ಸಾಧ್ಯತೆಯಿದೆ.
ಕಿವೀಸ್ ಬ್ಯಾಟರ್ ಡೆವೊನ್ ಕಾನ್‌ವೇ ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಮೋಘ ಪ್ರದರ್ಶನ ತೋರುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಡೆವೊನ್ ಕಾನ್‌ವೇ 16 ಪಂದ್ಯಗಳನ್ನಾಡಿ 672 ರನ್ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಫೈನಲ್ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 47 ರನ್ ಸಿಡಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಇದೀಗ ಡೆವೊನ್ ಕಾನ್‌ವೇ ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವ ಬೆನ್ನಲ್ಲೇ ಬೆಂಗಳೂರು ಮೂಲದ ಸ್ಟಾರ್ ಆಲ್ರೌಂಡರ್ ರಚಿನ್ ರವೀಂದ್ರ ಸಿಎಸ್‌ಕೆ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.