IPL 2022: ದಿಢೀರ್ ಎನ್ನುವಂತೆ ಸನ್‌ರೈಸರ್ಸ್‌ಹೈದರಾಬಾದ್ ತಂಡದ ಕೋಚ್ ಹುದ್ದೆ ತೊರೆದ ಸೈಮನ್ ಕ್ಯಾಟಿಚ್.!
ಬೆಂಗಳೂರು: ಬಹುತೇಕ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಮುಂದಿನ ತಿಂಗಳು, ಅಂದರೆ ಮಾರ್ಚ್ ಕೊನೆಯ ವಾರದ ವೇಳೆಗೆ ಆರಂಭವಾಗುವ ಸಾಧ್ಯತೆಯಿದೆ. ಇದೇ ವೇಳೆ ಸನ್‌ರೈಸರ್ಸ್ ಹೈದರಾಬಾದ್ (SunRisers Hyderabad) ತಂಡದ ಸಹಾಯಕ ಕೋಚ್ ಆಗಿದ್ದ ಸೈಮನ್ ಕ್ಯಾಟಿಚ್ (Simon Katich) ದಿಢೀರ್ ಎನ್ನುವಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಕ್ಯಾಟಿಚ್ ಐಪಿಎಲ್ (IPL) ಆರಂಭಕ್ಕೆ ಕೆಲವು ದಿನಗಳು ಬಾಕಿ ಇರುವಾಗಲೇ ತಮ್ಮ ಸ್ಥಾನಕ್ಕೇ ರಾಜೀನಾಮೆ ನೀಡಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ ನೋಡಿ
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಬಹುತೇಕ ಇನ್ನೊಂದು ತಿಂಗಳು ಬಾಕಿ ಇದೆ. ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು ಮುಕ್ತಾಯವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿವೆ.
ಆದರೆ ಇನ್ನೂ ಐಪಿಎಲ್ ಟೂರ್ನಿ ಆರಂಭಕ್ಕೆ ಮುಂಚೆಯೇ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪಾಲಿಗೆ ದೊಡ್ಡ ಆಘಾತವೊಂದು ಎದುರಾಗಿದ್ದು, ಮೆಗಾ ಹರಾಜು ಮುಕ್ತಾಯವಾಗಿ ಒಂದು ವಾರ ಕಳೆಯುವುದರೊಳಗಾಗಿ ಹೈದರಾಬಾದ್ ತಂಡದ ಸಹಾಯಕ ಕೋಚ್ ಆಗಿದ್ದ ಸೈಮನ್ ಕ್ಯಾಟಿಚ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ವರದಿಯಾಗಿದೆ.
'ದ ಆಸ್ಟ್ರೇಲಿಯನ್' ವರದಿಯ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹರಾಜಿಗೂ ಮುಂಚೆ ಮಾಡಿಕೊಂಡ ಪ್ಲಾನ್ ಬಗ್ಗೆ ಸೈಮನ್ ಕ್ಯಾಟಿಚ್ ಅಸಮಾಧಾನ ಹೊಂದಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ತನ್ನ ಮಾಜಿ ನಾಯಕ ಡೇವಿಡ್ ವಾರ್ನರ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಕೆಲ ತಿಂಗಳ ಹಿಂದಷ್ಟೇ ದೊಡ್ಡ ವಿವಾದವಾಗಿತ್ತು. ಕಳಫೆ ಫಾರ್ಮ್ ಅನುಭವಿಸುತ್ತಿದ್ದ ವಾರ್ನರ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ನಾಯಕತ್ವದಿಂದ ಕಳೆಗಿಳಿಸಿತ್ತು. ಇದಾದ ಬಳಿಕ ಆಡುವ ಹನ್ನೊಂದರ ಬಳಗದಿಂದಲೇ ವಾರ್ನರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
Photo- iplt20.com
2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಅವರನ್ನು ಹೈದರಾಬಾದ್ ಫ್ರಾಂಚೈಸಿಯು ಸಾಕಷ್ಟು ನಿಕೃಷ್ಟವಾಗಿ ನಡೆಸಿಕೊಂಡಿತ್ತು. ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಮುಖಭಂಗ ಅನುಭವಿಸಿತ್ತು.
ಇದರ ಬೆನ್ನಲ್ಲೇ ಹೈದಾರಾಬಾದ್ ತಂಡದ ಹೆಡ್ ಕೋಚ್ ಟ್ರಾವೆಲ್ ಬೈಲೀಸ್ ಹಾಗೂ ಬ್ಯಾಟಿಂಗ್ ಕೋಚ್ ಬ್ರಾಡ್ ಹಡ್ಡಿನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ 2022ನೇ ಸಾಲಿನ ಐಪಿಎಲ್ ಟೂರ್ನಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೆಡ್ ಕೋಚ್ ಆಗಿ ಟಾಮ್ ಮೂಡಿ ಹಾಗೂ ಸಹಾಯಕ ಕೋಚ್ ಆಗಿ ಸೈಮನ್ ಕ್ಯಾಟಿಚ್ ಅವರನ್ನು ನೇಮಕ ಮಾಡಲಾಗಿತ್ತು.
2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಯುವ ಆಟಗಾರರಾದ ಅಬ್ದುಲ್ ಸಮದ್ ಹಾಗೂ ಉಮ್ರಾನ್ ಮಲಿಕ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇನ್ನು ಮೆಗಾ ಹರಾಜಿನಲ್ಲಿ ನಿಕೋಲಸ್ ಪೂರನ್, ಮಾರ್ಕೊ ಯಾನ್ಸೆನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.
ಐಪಿಎಲ್ ಮೆಗಾ ಹರಾಜಿನ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ ನೋಡಿ:
ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಉಮ್ರಾನ್ ಮಲಿಕ್, ಏಯ್ಡನ್ ಮಾರ್ಕ್‌ರಮ್, ಶಶಾಂಕ್ ಸಿಂಗ್, ರವಿಕುಮಾರ್ ಸಮರ್ಥ್, ರಾಹುಲ್ ತ್ರಿಪಾಠಿ, ಪ್ರಿಯಂ ಗರ್ಗ್, ಗ್ಲೆನ್ ಫಿಲಿಫ್ಸ್, ವಿಷ್ಣು ವಿನೋದ್, ನಿಕೋಲಸ್ ಪೂರನ್, ಮಾರ್ಕೊ ಯಾನ್ಸೆನ್, ಶಾನ್ ಅಬ್ಬೋಟ್, ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಸೌರಭ್ ದುಬೆ, ರೊಮಾರಿಯೋ ಶೆಫರ್ಡ್, ಫಜಲ್‌ಹಕ್ ಫಾರೂಕಿ, ಜಗದೀಶ ಸುಚಿತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಟಿ. ನಟರಾಜನ್, ಭುವನೇಶ್ವರ್ ಕುಮಾರ್.