IPL 2021: ದಿಟ್ಟ ಹೋರಾಟ ನಡೆಸಿದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ಗೀಗ ನಿಷೇಧದ ಭೀತಿ..!
ಅಬುಧಾಬಿ: 14ನೇ ಆವೃತ್ತಿಯ ಐಪಿಎಲ್(IPL 2021) ಟೂರ್ನಿಯ ಯುಎಇ ಚರಣದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ಎದುರು ರೋಚಕ ಜಯ ಸಾಧಿಸಿದ್ದ ರಾಜಸ್ಥಾನ ರಾಯಲ್ಸ್(Rajasthan Royals) ತಂಡವು ಇದೀಗ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಎದುರು 33 ರನ್‌ಗಳಿಂದ ಸೋಲಿಗೆ ಶರಣಾಗಿದೆ. ನಾಯಕ ಸಂಜು ಸ್ಯಾಮ್ಸನ್(Sanju Samson) ಏಕಾಂಗಿ ಹೋರಾಟ ನಡೆಸಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇದೆಲ್ಲದರ ನಡುವೆ ಗಾಯದ ಮೇಲೆ ಬರೆ ಎನ್ನುವಂತೆ ಇದೀಗ ಸಂಜು ಸ್ಯಾಮ್ಸನ್ ನಿಷೇಧದ ಭೀತಿಗೆ ಸಿಲುಕಿದ್ದಾರೆ. ಅಷ್ಟಕ್ಕೂ ರಾಯಲ್ಸ್ ನಾಯಕ ಸ್ಯಾಮ್ಸನ್ ಮಾಡಿದ ಎಡವಟ್ಟಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 33 ರನ್‌ಗಳ ಜಯ ಸಾಧಿಸಿ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶ್ರೇಯಸ್ ಅಯ್ಯರ್ ಹಾಗೂ ಶಿಮ್ರೊನ್ ಹೆಟ್ಮೇಯರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತ್ತು.'
ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೈಸ್ವಾಲ್, ಲಿವಿಂಗ್‌ಸ್ಟೋನ್ ಹಾಗೂ ಮಿಲ್ಲರ್, ಪರಾಗ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
ನಾಯಕ ಸಂಜು ಸ್ಯಾಮ್ಸನ್ ಅಜೇಯ 70 ರನ್ ಬಾರಿಸಿದರಾದರೂ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಸ್ಯಾಮ್ಸನ್‌ಗೆ ಮತ್ತೊಂದು ಆಘಾತ ಎದುರಾಗಿದೆ.
ಡೆಲ್ಲಿ ಎದುರು ಶನಿವಾರ ನಡೆದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರುಪಾಯಿ ದಂಡ ಹಾಗೂ ಆಡುವ ಹನ್ನೊಂದರ ಬಳಗದಲ್ಲಿದ್ದ ಇನ್ನು 10 ಆಟಗಾರರಿಗೆ ತಲಾ 6 ಲಕ್ಷ ರುಪಾಯಿ ಇಲ್ಲವೇ ಪಂದ್ಯದ ಸಂಭಾವನೆಯ 25% ರಷ್ಟನ್ನು ದಂಡದ ರೂಪದಲ್ಲಿ ಶಿಕ್ಷೆ ವಿಧಿಸಲಾಗಿದೆ.
ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದ ವೇಳೆಯು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ನಿಧಾನಗತಿಯ ಬೌಲಿಂಗ್ ಮಾಡಿತ್ತು. ಹೀಗಾಗಿ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿತ್ತು. ಇದೀಗ ಎರಡನೇ ಬಾರಿಗೆ ಸಂಜು ದಂಡ ತೆತ್ತಿದ್ದಾರೆ.
ಒಂದು ವೇಳೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಇದೇ ಆವೃತ್ತಿಯಲ್ಲಿ ಮೂರನೇ ಬಾರಿಗೆ ನಿಧಾನಗತಿಯ ಬೌಲಿಂಗ್ ನಡೆಸಿದರೆ, ಸಂಜು ಸ್ಯಾಮ್ಸನ್‌ಗೆ 30 ಲಕ್ಷ ರುಪಾಯಿ ದಂಡ ಹಾಗೂ ಮುಂದಿನ ಒಂದು ಪಂದ್ಯದಿಂದ ನಿಷೇಧ/ಹೊರಗುಳಿಯಬೇಕಾಗುತ್ತದೆ.
ಮೂರು ಅಥವಾ ಮೂರಕ್ಕಿಂತ ಹೆಚ್ಚು ಬಾರಿ ಬೌಲಿಂಗ್ ಪಡೆ ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿದರೆ ಬೌಲಿಂಗ್ ತಂಡದ ನಾಯಕನಿಗೆ 30 ಲಕ್ಷ ರುಪಾಯಿ ದಂಡ ಹಾಗೂ ಮುಂದಿನ ಒಂದು ಪಂದ್ಯದಿಂದ ಬ್ಯಾನ್ ಮಾಡುವ ನಿಯಮವನ್ನು ಐಪಿಎಲ್ ಆಯೋಜಕರು ತೀರ್ಮಾನಿಸಿದ್ದಾರೆ.